ಬೆಂಗಳೂರು,ಡಿ.26- ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಇದೀಗ ಸಾವಿನ ಸಂಖ್ಯೆ 7 ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ ನಿನ್ನೆ 6 ಮಂದಿ ಸಜೀವ ದಹನಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಸೀಬರ್ಡ್ ಬಸ್ ಚಾಲಕ ಮಹಮದ್ ರಫೀಕ್ (42) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾಂವಿ ನಿವಾಸಿ ರಫೀಕ್ ಅವರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಿನ್ನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ಮೊನ್ನೆ ರಾತ್ರಿ 8.40ರ ಸುಮಾರಿಗೆ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಬಸ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಹೋಗುತ್ತಿತ್ತು.
ನಿನ್ನೆ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ನುಗ್ಗಿ ಈ ಬಸ್‌ಗೆ ಅಪ್ಪಳಿಸಿದ್ದರಿಂದ ಹಠಾತ್ ಬೆಂಕಿ ಹೊತ್ತಿಕೊಂಡು ಐದು ವರ್ಷದ ಮಗು ಸೇರಿದಂತೆ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಹಾಗೂ ಲಾರಿ ಚಾಲಕ ಸೇರಿ 6 ಮಂದಿ ಸಜೀವ ದಹನವಾದರು.
ಡಿಎನ್‌ಎ ಪರೀಕ್ಷೆ:
ಈ ನಡುವೆ ಮೃತದೇಹಗಳ ಅಸ್ಥಿಪಂಜರಗಳ ಸ್ಯಾಂಪಲ್ ಪಡೆದಿರುವ ವೈದ್ಯರು ಡಿಎನ್‌ಎ ಪರೀಕ್ಷೆಗೆ ರವಾನಿಸಿದ್ದಾರೆ.ಮೃತದೇಹಗಳ ಡಿಎನ್‌ಎ ಪರೀಕ್ಷೆಗಾಗಿ ಮೃತರ ಸಂಬಂಧಿಕರ ರಕ್ತದ ಮಾದರಿಗಳನ್ನು ವೈದ್ಯರು ಸಂಗ್ರಹಿಸಿದ್ದು, ಇದೀಗ ಬೋನ್ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಹುಬ್ಬಳ್ಳಿ ಲ್ಯಾಬ್‌ಗೆ ರವಾನಿಸಿದ್ದಾರೆ.
ಒಂದೆರಡು ದಿನದಲ್ಲಿ ಡಿಎನ್‌ಎ ವರದಿ ಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ತ್ವರಿತವಾಗಿ ವರದಿ ನೀಡುವಂತೆ ಮನವಿ ಮಾಡಿದ್ದಾರೆ. ಡಿಎನ್‌ಎ ವರದಿ ಬಂದ ಬಳಿಕ ಖಚಿತವಾಗಿ ಮೃತರ ಗುರುತು ಪತ್ತೆಯಾಗಲಿದೆ. ಆ ನಂತರ ಮೃತದೇಹಗಳನ್ನು ಅವರವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವೀಂದ್ರ ರವರು ಮಾಹಿತಿ ನೀಡಿದ್ದಾರೆ.
