ಬೆಂಗಳೂರು, ಜ.6-ನವೆಂಬರ್‌ನಿಂದ ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಇಳಿಮುಖವಾಗುತ್ತಿದೆ. ಆದರೆ, ಕಳೆದ ವರ್ಷಕ್ಕಿಂತ ಹೆಚ್ಚು ತೆರಿಗೆ ಈ ವರ್ಷ ಸಂಗ್ರಹವಾಗುತ್ತಿದೆ. ನವೆಂಬರ್ ತಿಂಗಳಿನಂತೆ ಡಿಸೆಂಬರ್ ತಿಂಗಳಲ್ಲೂ ರಾಜ್ಯದ ವಾಣಿಜ್ಯ ತೆರಿಗೆಗಳ ಸಂಗ್ರಹದಲ್ಲಿ ಇಳಿಕೆಯಾಗಿದೆ. ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ 469 ಕೋಟಿ ರೂ. ನಷ್ಟು ಕಡಿಮೆ ಸಂಗ್ರಹವಾಗಿದೆ. ಆದರೆ, ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸು. 770 ಕೋಟಿ ರೂ.ನಷ್ಟು ಹೆಚ್ಚಾಗಿದೆ.
ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು 81,097.41 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದರಲ್ಲಿ 60,042.62 ಕೋಟಿ ರೂ. ಸರಕು ಸೇವಾ ತೆರಿಗೆ, 19,928.59 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 1,126.20 ವೃತ್ತಿ ತೆರಿಗೆ ಸೇರಿದೆ.
ಡಿಸೆಂಬರ್‌ನಲ್ಲಿ 6519.86 ಕೋಟಿ ರೂ. ಸರಕು ಸೇವಾ ತೆರಿಗೆ, 2334.07 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 103.12 ವೃತ್ತಿ ತೆರಿಗೆ ಸೇರಿ ಒಟ್ಟು 8957.05 ಕೋಟಿ ರೂ. ನಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಸರಕು ಸೇವಾ ತೆರಿಗೆಯಲ್ಲಿ ಸುಮಾರು 4 ಕೋಟಿ ರೂ.ನಷ್ಟು ಕಡಿಮೆ ತೆರಿಗೆ ಸಂಗ್ರಹವಾಗಿದೆ.
2024ರ ಡಿಸೆಂಬರ್‌ನಲ್ಲಿ 8,185.69 ಕೋಟಿ ರೂ.ನಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿತ್ತು. ಕಳೆದ ನವೆಂಬರ್‌ನಲ್ಲಿ 9,426.05ರಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿತ್ತು. ಇದು ಡಿಸೆಂಬರ್‌ನಲ್ಲಿ 8,957.05ರಷ್ಟು ಸಂಗ್ರಹವಾಗಿ 469 ಕೋಟಿ ರೂ.ನಷ್ಟು ಇಳಿಕೆಯಾಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ 1,02,585.52 ಕೋಟಿ ರೂ.ನಷ್ಟು ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚು ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇನ್ನೂ ಮೂರು ತಿಂಗಳು ಬಾಕಿ ಇದ್ದು, ಗುರಿ ತಲುಪುವ ನಿರೀಕ್ಷೆ ಇದೆ.
