ಬೆಂಗಳೂರು, ಜ.9- ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 11 ಲಕ್ಷ ಕೋಟಿ ರೂಪಾಯಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡುವವರು ಅದನ್ನು ಸಾಬೀತು ಮಾಡಬೇಕು. ಇಲ್ಲವಾದರೆ ಮಾನ ನಷ್ಟ ಮೊಕದ್ದಮೆ ದಾಖಲಿಸಲಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರ ಬಿಜೆಪಿಯವರ ಕೈಯಲ್ಲಿಯೇ ಇದೆ. 11 ಲಕ್ಷ ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಯಾರಾದರೂ ಹಗುರವಾಗಿ ಮಾತನಾಡುವುದು ಸರಿಯಲ್ಲ. ಆ ರೀತಿ ಹಗರಣವಾಗಿದೆ ಎಂಬ ಮಾಹಿತಿ ಇದೆಯೇ ? ನಿಮಗೆ ತಾಕತ್ತು ಇದೆಯೇ ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಹೇಳಿದರು.
ಈ ಹಿಂದೆ ಜಾರಿಯಲ್ಲಿದ್ದ ಮಹಾತ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಕೇಂದ್ರ ಸರ್ಕಾರ ಈಗ ಹೊಸದಾಗಿ ರೂಪಿಸಿರುವ ವಿಕಸಿತ ಭಾರತ ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ಕಾಯ್ದೆಯ ನಡುವಿನ ವ್ಯತ್ಯಾಸಗಳ ಬಗ್ಗೆ ಬಿಜೆಪಿಯ ನಾಯಕರು ಬಹಿರಂಗ ಚರ್ಚೆಗೆ ಬರಲಿ. ನಾನು ಮುಕ್ತ ಆಹ್ವಾನ ನೀಡುತ್ತಿದ್ದೇನೆ ಎಂದರು.
ಕೇಂದ್ರ ಸಚಿವರಾಗಲಿ ಬಿಜೆಪಿಯ ಅಧ್ಯಕ್ಷರಾಗಲಿ ಅಥವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಲಿ ಚರ್ಚೆಗೆ ಬಂದರೆ ಅವರೊಂದಿಗೆ ಎರಡು ಯೋಜನೆಗಳಲ್ಲಿನ ವ್ಯತ್ಯಾಸಗಳ ಚರ್ಚೆಗೆ ತಾವು ಸಿದ್ದ ಎಂದರು.
ಉದ್ಯೋಗ ಖಾತ್ರಿ ಯೋಜನೆ ಬದಲಾವಣೆಯ ಬಗ್ಗೆ ಚರ್ಚೆ ಮಾಡಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲಾಗುವುದು. ಬಿಜೆಪಿಯವರು ಈ ಕಾಯ್ದೆ ಬದಲಾವಣೆ ಬಗ್ಗೆ ಜನಾಂದೋಲನ ನಡೆಸಲು ಹೊರಟಿದ್ದಾರೆ. ನಾವು ಕೂಡ ಹೊಸ ಕಾಯ್ದೆಯಲ್ಲಿನ ದೋಷಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿ ಎಂದರು
ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಅಧಿಕಾರ ಅವಧಿ ಸಿಕ್ಕಿತು. ನನಗೆ ಅಷ್ಟರಮಟ್ಟಿನ ಕಾಲಾವಕಾಶ ಸಿಕ್ಕಿಲ್ಲ. ಆದರೆ ನನ್ನ ಕಾಲದಲ್ಲಿ ಮತ್ತು ಅವರ ಕಾಲದಲ್ಲಾಗಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಚರ್ಚೆಯಾಗಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಖುಷಿಪಡಲಿ, ಸಂತೋಷವಾಗಿರಲಿ ಎಂದು ಮಾರ್ಮಿಕವಾಗಿ ಹೇಳಿದರು.
ಉಪಮುಖ್ಯಮಂತ್ರಿಯಾದ ತಕ್ಷಣ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ಕೊಂಬುಗಳಿವೆಯೇ ಎಂದು ಟೀಕಿಸಿರುವ ಕುಮಾರಸ್ವಾಮಿಯವರು, ಬಳ್ಳಾರಿಯಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದನ್ನು ಪ್ರಶ್ನಿಸಿದ್ದಾರೆ. ನಾವು ವಿಧಾನ ಮಂಡಲದ ಅಧಿವೇಶನ ಕರೆಯುತ್ತೇವೆ. ಅಲ್ಲಿ ಚರ್ಚೆ ಮಾಡಲು ಅವರ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಕುಮಾರಸ್ವಾಮಿ ಹೇಳಲಿ ಎಂದರು.
ಕೇರಳದಲ್ಲಿ ಪ್ರಥಮಭಾಷೆಯನ್ನಾಗಿ ಮಲಯಾಳಂ ಅನ್ನು ಕಡ್ಡಾಯಗೊಳಿಸಿ ಘೋಷಿಸಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಹೆಚ್ಚಿನ ವಿವರ ಪಡೆದು ಪ್ರತಿಕ್ರಿಸುತ್ತೇನೆ ಎಂದರು.
