ಬೆಂಗಳೂರು,ಜ.1- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬಂದಿತ್ತು. ರಾಜ್ಯಾದ್ಯಂತ ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡಿದ್ದು, ವರ್ಷದ ಮೊದಲ ದಿನವಾದ ಇಂದು ಬೆಳಗ್ಗೆ ಜನರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ 2025ರ ಕಹಿ ನೆನಪುಗಳು ಮರೆಯಾಗಿ ಹೊಸ ವರ್ಷ ಸುಖ, ಶಾಂತಿ, ನೆಮದಿ, ಸಂಪತ್ತು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ ದೃಶ್ಯಗಳು ಸಾಮಾನ್ಯವಾಗಿದ್ದವು.
ಇಂದು ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಹೂವಿನ ಅಲಂಕಾರದೊಂದಿಗೆ ಧಾರ್ಮಿಕ ಕಾರ್ಯಗಳು ನೆರವೇರಿದವು. ಬೆಂಗಳೂರಿನ ಐತಿಹಾಸಿಕ ದೇವಾಲಯಗಳಾದ ಗವಿಗಂಗಾಧರೇಶ್ವರ, ಮಲ್ಲೇಶ್ವರದ ಕಾಡುಮಲ್ಲೇಶ್ವರ, ಮೈಸೂರು ರಸ್ತೆಯ ಗಾಳಿ ಆಂಜನೇಯ, ರಾಜಾಜಿನಗರ ಶ್ರೀರಾಮಮಂದಿರ, ಸಾಯಿಬಾಬಾ ದೇವಾಲಯ, ವಿಜಯನಗರ ಮಾರುತಿ ಬಂಡೆ ದೇವಾಲಯ, ಬನಶಂಕರಿ, ಆರ್‌ಆರ್‌ನಗರದ ರಾಜರಾಜೇಶ್ವರಿ ದೇವಾಲಯ, ಜ್ಞಾನಭಾರತಿ ಆವರಣದಲ್ಲಿರುವ ವಿಜ್ಞೇಶ್ವರ ದೇವಾಲಯ, ಗುಟ್ಟಳ್ಳಿ ಆಂಜನೇಯ ದೇವಾಲಯ ಮತ್ತಿತರ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಭಕ್ತರು ಸಹ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಅದೇ ರೀತಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ನಂಜುಂಡೇಶ್ವರ ದೇವಾಲಯ, ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗನಂದೀಶ್ವರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆ, ಯಡಿಯೂರು ಸಿದ್ದಲಿಂಗೇಶ್ವರ, ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಾಲಯಗಳಲ್ಲಿ ಸಹ ಪೂಜೆಗಳು ನೆರವೇರಿದವು.
ಹೊಸ ವರ್ಷದಂದು ಬಹುತೇಕ ಜನರು ಧರ್ಮಸ್ಥಳ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಮಣ್ಯ, ತಿರುಪತಿ, ಕಾಳಹಸ್ತಿ, ಉಡುಪಿ ಮತ್ತಿತರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಸಂಪ್ರದಾಯ ರೂಢಿಸಿಕೊಂಡಿದ್ದು, ನಿನ್ನೆಯೇ ಪುಣ್ಯ ಕ್ಷೇತ್ರಗಳಿಗೆ ತೆರಳಿ ಇಂದು ಪೂಜೆ ಸಲ್ಲಿಸಿದ್ದಾರೆ. 2025ರ ಕಹಿ ನೆನೆಪುಗಳು ಮರೆಯಾಗಿ 2026ರಲ್ಲಿ ಉತ್ತಮ ಮಳೆ-ಬೆಳೆಯಾಗಿ ರಾಜ್ಯ ಸುಭೀಕ್ಷೆಯಲ್ಲಿರುವಂತೆ ದೇವಾಲಯಗಳ ಅರ್ಚಕರು ಪೂಜೆ ಸಲ್ಲಿಸಿದ ದೃಶ್ಯಗಳು ಕಂಡುಬಂದವು.
