Saturday, December 6, 2025
Homeರಾಜ್ಯಸಂಪುಟ ಸಭೆಯಲ್ಲಿಂದು ವಿವಾದಿತ ಕಾನೂನುಗಳ ಕುರಿತು ಚರ್ಚೆ

ಸಂಪುಟ ಸಭೆಯಲ್ಲಿಂದು ವಿವಾದಿತ ಕಾನೂನುಗಳ ಕುರಿತು ಚರ್ಚೆ

Discussion on controversial laws in the cabinet meeting

ಬೆಂಗಳೂರು, ಡಿ.4- ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ಕಾಯ್ದೆ, ಕರ್ನಾಟಕ ಸಾಮಾಜಿಕ ಬಹಿಷ್ಕಾರ ನಿಷೇಧ ಮತ್ತು ಪರಿಹಾರ ಕುರಿತ ಕಾನೂನುಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿಂದು ಮಹತ್ವದ ಚರ್ಚೆಗಳಾಗಿವೆ.

ಇದೇ ತಿಂಗಳ 8 ರಿಂದ ಬೆಳ ಗಾವಿಯಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ವಿವಾದಿತ ಮಸೂದೆಗಳನ್ನು ಮಂಡಿಸಲು ತಯಾರಿಯಾಗಿದ್ದು, ಇಂದು ಸಂಪುಟದಲ್ಲಿ ಮಹತ್ವ ಚರ್ಚೆಗಳಾಗಿದೆ.ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಬಗ್ಗೆ ಕಠಿಣ ಕಾನೂನು ರೂಪಿಸಲಾಗಿದ್ದು, ಇದು ಬಹಳಷ್ಟು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಬೆಂಬಲಿತ ಪ್ರಮುಖರಿಗೆ ಮುಳುವಾಗುವ ಸಾಧ್ಯತೆ ಇದೆ. ಈ ಕಾಯ್ದೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೇಳುವ ನಿರೀಕ್ಷೆ ಇದೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ವಿಧೇಯಕ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಗಳ ಬಗ್ಗೆಯೂ ಚರ್ಚೆಯಾಗಿದೆ. ವಿಧಾನ ಮಂಡಲದಲ್ಲಿ ಮಂಡನೆಗೆ ಈ ವಿಧೇಯಕಗಳನ್ನು ಅಂಗೀಕರಿಸುವ ಸಾಧ್ಯತೆ ಇದೆ.

ಜಾನುವಾರುಗಳನ್ನು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಮತ್ತೊಂದು ವಿವಾದ ಸೃಷ್ಟಿಸುವ ಅಂದಾಜುಗಳಿವೆ. ಈ ಹಿಂದೆ ಬಿಜೆಪಿ ಸರ್ಕಾರ ಗೋ ಹತ್ಯೆಗೆ ಕಡಿವಾಣ ಹಾಕಲು ಕಠಿಣ ಕಾನೂನನ್ನು ರೂಪಿಸಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌‍ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಅಧಿಕಾರಕ್ಕೆ ಬಂದರೆ ಕಾನೂನನ್ನು ಸರಳೀಕರಣಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅದರಂತೆ ಗೋ ಹತ್ಯೆ ಕ್ರಿಮಿನಲ್‌ ಅಪರಾಧವಾಗಿರುವುದನ್ನು ಸರಳೀಕರಣಗೊಳಿಸಲು ಸಂಪುಟದಲ್ಲಿ ಚರ್ಚಿಸಲಾಗಿದೆ.

ಬಿಜೆಪಿಯ ಮಹತ್ವಾಕಾಂಷೆಯ ಈ ವಿಧೇಯಕ್ಕಕ್ಕೆ ಕಾಂಗ್ರೆಸ್‌‍ ಸರ್ಕಾರ ವಿವಾದವನ್ನು ಕೆದಕುತ್ತಿದೆ ಪ್ರಸ್ತುತ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕೊಳ್ಳಿ ಇಡುವ ಮೂಲಕ ವಿವಾದವನ್ನು ಕೆಣಕುತ್ತಿದೆ.
ಅಧಿಕಾರ ಹಂಚಿಕೆಯ ವಿವಾದ ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಹಂತದಲ್ಲಿ ವಿವಾದಿತ ಕಾನೂನುಗಳನ್ನು ಮುನ್ನಡೆಗೆ ತರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಉಳಿದಂತೆ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಘಾಟಿ ಸುಬ್ರಹಣ್ಯ ಕ್ಷೇತ್ರ ಅಭಿವೃದ್ಧಿ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರ ಕಾನೂನುಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

2025 ನೇ ಸಾಲಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದ್ದು, 100 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ಖರ್ಚು ಮಾಡಲಾಗಿದೆ. ಅದಕ್ಕೆ ಸಂಪುಟದಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕಾಗಿ ಕೇಂದ್ರ ಸರ್ಕಾರದ ನೆರವು ಬಳಕೆಗೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಕರ್ನಾಟಕ ಒಳನಾಡು ನೌಕೆ ನಿಯಮಗಳ ಬಗ್ಗೆ ವಿಚಾರ ವಿನಿಮಯ ನಡೆದಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕಲಬುರಗಿ, ಗದಗ, ದಾವಣಗೆರೆ, ಮಂಗಳೂರು, ಬೆಂಗಳೂರಿನ ಕೆಂಗೇರಿ ಸಮೀಪ ಭೀಮನಕುಪ್ಪೆ ಹಾಗೂ ಮೈಸೂರಿನಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳನ್ನು 452 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಬಗ್ಗೆ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಮಿತಿ ಆವರಣದಲ್ಲಿ 28 ಕೋಟಿ ರೂಪಾಯಿ ಖರ್ಚು ಮಾಡಿ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ನಿರ್ಮಿಸಲು ಚರ್ಚಿಸಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 19 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 304 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಚರ್ಚಿಸಲಾಗಿದೆ.
ಕುರಿ ಮತ್ತು ಮೇಕೆಗಳನ್ನು ಬಾಧಿಸುವ ನೀಲಿ ನಾಲಿಗೆ ರೋಗ ಹಾಗೂ ಇನ್ನಿತರ ರೋಗಗಳಿಗೆ ಲಸಿಕೆ ತಯಾರಿಸಲು ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಲು 27 ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ. ಬೆಂಗಳೂರಿನ ಸಜ್ಜೆಪಾಳ್ಯದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ 03 ಎಕರೆ ಜಮೀನನ್ನು ನೆಪ್ರೋ ಯುರಾಲಜಿ ಸಂಸ್ಥೆಯ ಆಸ್ಪತ್ರೆ ನಿರ್ಮಾಣಕ್ಕಾಗಿ ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತಿದೆ.

ಆಯುಷಾನ್‌ ಭಾರತ್‌ ಯೋಜನೆಯಡಿ 217 ಕೋಟಿ ರೂಪಾಯಿ ಖರ್ಚು ಮಾಡಿ 334 ಆಯುಷಾನ್‌ ಆರೋಗ್ಯ ಮಂದಿರಗಳನ್ನು ನಿರ್ಮಿಸಲು, 15ನೇ ಹಣಕಾಸು ಆಯೋಗದ ಅನುದಾನದಲ್ಲಿ 22 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು, ಜೊತೆಗೆ 80 ಕೋಟಿ ರೂಪಾಯಿ ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಚರ್ಚಿಸಲಾಗಿದೆ.

ಫಾರ್ಮಸಿ ಡಿಪ್ಲೊಮೋ ತೇರ್ಗಡೆಯಾಗಿರುವ ಒಂದು ಸಾವಿರ ವಿದ್ಯಾರ್ಥಿಗಳನ್ನು ಮಂಜೂರಾಗಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ 11 ತಿಂಗಳ ಅವಧಿಯ ಟೈಫಂಡ್‌ ಆಧಾರದ ಮೇಲೆ ನೇಮಿಸಲು ಸಮತಿಸಲಾಗಿದೆ. 108 ಆರೋಗ್ಯ ಕವಚ ಸೇವೆಯಡಿಯಲ್ಲಿ ನೇಮಕಗೊಳ್ಳಲಿರುವ ತುರ್ತು ವೈದ್ಯಕೀಯ ಸಿಬ್ಬಂದಿ ಮತ್ತು ಚಾಲಕರಿಗೆ ಕನಿಷ್ಠ ವೇತನ ದರದಲ್ಲಿ ಮೂಲವೇತನ ನಿಗದಿ ಮಾಡುವುದು ಹಾಗೂ ಹಿಂದಿನ ಸೇವಾ ಅನುಭವ ಆದರೆ ಪ್ರತಿ ವರ್ಷಕ್ಕೆ ಶೇಕಡ ಒಂದರಷ್ಟು , ಗರಿಷ್ಠ 15 ವರ್ಷಗಳ ಅವಧಿಗೆ ಶೇ.15ರಷ್ಟು ಕಾರ್ಯಕ್ಷಮತೆ ವೇತನ ಹಾಗೂ ಶೇಕಡ 10 ರಷ್ಟು ಪ್ರೋತ್ಸಾಹ ಧನ ನೀಡಲು ಚರ್ಚಿಸಲಾಗಿದೆ.ಹುಬ್ಬಳ್ಳಿಯ ಕುಸುಗಲ್ಲ ಗ್ರಾಮದಲ್ಲಿ ಕಾಂಗ್ರೆಸ್‌‍ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ನಿರ್ಧರಿಸಲಾಗಿದೆ.

RELATED ARTICLES

Latest News