ಬೆಂಗಳೂರು,ಜ.24- ಬಳ್ಳಾರಿ ನಗರದ ಬೆಳಗಲ್ಲು ರಸ್ತೆಯಲ್ಲಿನ ಜನಾರ್ದನ ರೆಡ್ಡಿ ಒಡೆತನದ ಜಿ.ಸ್ಕೈರ್ ಲೇಟ್ನ ಮಾಡೆಲ್ ಹೌಸ್ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿಯ ಕೌಲ್ಬಜಾರ್ ನಿವಾಸಿ ಅಸ್ತಮ್ ಅಲಿಯಾಸ್ ಸುರೇಶ್ (32), ಸೋಹೈಲ್ ಅಲಿಯಾಸ್ ಸಾಹಿಲ್ (18) ಹಾಗೂ ಆರು ಮಂದಿ ಅಪ್ರಾಪ್ತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲ ಬಾಲಕರು ಈ ಮಾದರಿ ಮನೆಯ ಮೇಲ್ಚಾವಣಿಗೆ ತೆರಳಿ ರೀಲ್್ಸ ಚಿತ್ರೀಕರಣ ಹಾಗೂ ಫೋಟೋ, ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಈ ಗುಂಪಿನಲ್ಲಿದ್ದ ಇಬ್ಬರು ರೀಲ್್ಸಗಾಗಿ ಹಚ್ಚಿದ ಬೆಂಕಿ ತದನಂತರ ಅದು ದೊಡ್ಡ ಮಟ್ಟದ ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎಂದು ಗೊತ್ತಾಗಿದೆ.ಈ ಘಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿರುವ ಎಂಟು ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ಸಂಗ್ರಹಿಸಿದ್ದು ತನಿಖೆ ಪ್ರಗತಿಯಲ್ಲಿದೆ.
ಈ ಮನೆಯಲ್ಲಿ ಸಂಜೆ 6.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ನೋಡನೋಡುತ್ತಿದ್ದಂತೆ ಬೆಂಕಿ ಮನೆ ಪೂರ್ತಿ ಆವರಿಸಿದೆ. ಮನೆಯ ಬಾಗಿಲು ಕಿಟಕಿಗಳನ್ನು ಮುರಿದು, ಗಾಜುಗಳನ್ನು ಒಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಶಯಾಸ್ಪದ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
