Wednesday, December 31, 2025
Homeರಾಜ್ಯನಿಧನರಾದ ಇಬ್ಬರು ಶಾಸಕರ ಸ್ಥಾನಕ್ಕೆ ಸದ್ಯದಲ್ಲೇ ಎಲೆಕ್ಷನ್, ಆಡಳಿತ-ವಿಪಕ್ಷಗಳಿಗೆ ಅಗ್ನಿಪರೀಕ್ಷೆ

ನಿಧನರಾದ ಇಬ್ಬರು ಶಾಸಕರ ಸ್ಥಾನಕ್ಕೆ ಸದ್ಯದಲ್ಲೇ ಎಲೆಕ್ಷನ್, ಆಡಳಿತ-ವಿಪಕ್ಷಗಳಿಗೆ ಅಗ್ನಿಪರೀಕ್ಷೆ

Elections to be held soon for the seats of two deceased MLAs

ಬೆಂಗಳೂರು,ಡಿ.31- ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ಇಬ್ಬರು ಶಾಸಕರು ನಿಧನರಾದ ಹಿನ್ನೆಲೆಯಲ್ಲಿ ಸದ್ಯದಲ್ಲೇ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆಗೆ ಮುಹೂರ್ತ ನಿಗದಿಪಡಿಸಲಿದ್ದು, ಸರ್ಕಾರ ಹಾಗು ಪ್ರತಿಪಕ್ಷಕ್ಕೆ ಅಗ್ನಿಪರೀಕ್ಷೆ ಎದುರಾಗಲಿದೆ. ಈ ಹಿಂದೆ ರಾಜ್ಯದಲ್ಲಿ ನಡೆದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆದ್ದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌‍ಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು.

ಇದೀಗ ಕಾಂಗ್ರೆಸ್‌‍ ಪಕ್ಷದ ಹಿರಿಯ ಮುಖಂಡರು ಹಾಗು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ(ದಾವಣಗೆರೆ ದಕ್ಷಿಣ) ಹಾಗೂ ಮಾಜಿ ಸಚಿವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್‌.ವೈ.ಮೇಟಿ ಅವರುಗಳು ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದರು.
ತೆರವಾಗಿರುವ ಎರಡೂ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ದಿನಾಂಕವನ್ನು ಘೋಷಣೆ ಮಾಡುವ ಸಂಭವವಿದೆ.

ನಿಯಮಗಳ ಪ್ರಕಾರ ಒಂದು ಕ್ಷೇತ್ರದಲ್ಲಿ ಜನಪ್ರತಿನಿಧಿ ರಾಜೀನಾಮೆ ಇಲ್ಲವೇ ಆಕಸಿಕವಾಗಿ ನಿಧನರಾದರೆ ತೆರವಾಗಿರುವ ಈ ಕ್ಷೇತ್ರಕ್ಕೆ 6 ತಿಂಗಳೊಳಗೆ ಚುನಾವಣೆ ನಡೆಸಬೇಕೆಂಬ ನಿಯಮವಿದೆ. ಇದರನ್ವಯ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಆಯೋಗ ದಿನಾಂಕವನ್ನು ಘೋಷಿಸಲಿದ್ದು, ರಾಜ್ಯದಲ್ಲಿ ಮತ್ತೊಂದು ಮಿನಿ ಮಹಾಸಮರ ವೇದಿಕೆ ಸಜ್ಜಾಗಲಿದೆ.

ಸ್ಥಳೀಯ ಸಂಸ್ಥೆಗಳಾ ಜಿಲ್ಲಾ, ತಾಲ್ಲೂಕು ಗ್ರಾಮಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಜಿಬಿಜೆ ಚುನಾವಣೆ ಜೊತೆಗೆ ಈ ಎರಡು ಕ್ಷೇತ್ರಗಳ ಚುನಾವಣೆ ನಡೆಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾರರ ಅಂತಿಮಪಟ್ಟಿ ಸಿದ್ದವಾಗಲು ಇನ್ನು ಸಮಯ ಅವಕಾಶ ಬೇಕು.

ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಚ್‌-ಏಪ್ರಿಲ್‌ ತಿಂಗಳ ಮಧ್ಯಭಾಗದಲ್ಲಿ ನಡೆಸಲು ಉತ್ಸುಕತೆ ತೋರಿದೆ. ಅಷ್ಟರೊಳಗೆ ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಭರ್ಜರಿ ಸಿದ್ದತೆ:
ಉಪಚುನಾವಣೆಯನ್ನು ಸಾಮಾನ್ಯವಾಗಿ ಆಡಳಿತಾರೂಢ ಪಕ್ಷಗಳೇ ಗೆಲ್ಲುವ ಅಲಿಖಿತ ಶಿಷ್ಟಾಚಾರ ಇರುತ್ತದೆ. ಮತದಾರರು ಸರ್ಕಾರ ನಡೆಸುವ ಪಕ್ಷಕ್ಕೆ ಒಲವು ತೋರುವುದು ಹೆಚ್ಚು. ಗೆದ್ದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಲಭ್ಯವಾದರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಡೆಯುತ್ತದೆ ಎಂಬ ಭಾವನೆ ಮತದಾರರಲ್ಲಿ ಇರುತ್ತದೆ.

ಹೀಗಾಗಿ ಎರಡು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌‍ ಈಗಾಗಲೇ ತೆರೆಮರೆಯಲ್ಲಿ ಸಿದ್ದತೆಯನ್ನು ಪೂರ್ಣಗೊಳಿಸಿದೆ. ಕ್ಷೇತ್ರಗಳಿಗೆ ಇನ್ನು ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲವಾದರೂ ಮೂಲಗಳ ಪ್ರಕಾರ ಉಪಚುನಾವಣೆಯಲ್ಲಿ ಅವರ ಕುಟುಂಬಗಳಿಗೆ ಮಣೆ ಹಾಕುವುದು ಹೆಚ್ಚು.

ಕುಟುಂಬದವರಿಗೆ ಟಿಕೆಟ್‌ ನೀಡಿದರೆ ಅನುಕಂಪದ ಅಲೆಯಲ್ಲಿ ಗೆದ್ದು ಬಿಡಬಹುದೆಂಬ ಲೆಕ್ಕಾಚಾರವಿರುತ್ತದೆ. ಹೀಗಾಗಿ ಕಾಂಗ್ರೆಸ್‌‍ ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ, ದಾವಣಗೆರೆಯಲ್ಲಿ ಶಾಮನೂರು ಕುಟುಂಬಕ್ಕೆ ಮಣೆ ಹಾಕಬಹುದು. ಬಾಗಲಕೋಟೆಯಲ್ಲಿ ಎಚ್‌.ವೈ.ಮೇಟಿ ಪುತ್ರರು ಸಕ್ರಿಯ ರಾಜಕಾರಣದಲ್ಲಿ ಇರುವುದರಿಂದ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗಬಹುದು.

ಇತ್ತ ದಾವಣಗೆರೆ ದಕ್ಷಿಣದಲ್ಲೇ ಶಾಮನೂರು ಕುಟುಂಬದ ಮತ್ತೊಬ್ಬ ಪುತ್ರನಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಈಗಾಗಲೇ ಪುತ್ರ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಸಚಿವರಾಗಿದ್ದರೆ, ಅವರ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಂಸದರು.ಮೂಲಗಳ ಪ್ರಕಾರ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್‌‍.ಎಸ್‌‍.ಬಕ್ಕೇಶ್‌ ಸ್ಪರ್ಧೆಗಿಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬಿಜೆಪಿಯಲ್ಲಿ ಯಾರು?:
ಇನ್ನು ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಪ್ರಬಲವಾಗಿರುವುದರಿಂದ ಜೆಡಿಎಸ್‌‍ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಏಕೆಂದರೆ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್‌‍ ಹೇಳಿಕೊಳ್ಳುವಂತಹ ಸಂಘಟನೆಯನ್ನು ಹೊಂದಿಲ್ಲ. ಹೀಗಾಗಿ ಮಿತ್ರಪಕ್ಷ ಬಿಜೆಪಿಗೆ ಬೆಂಬಲ ನೀಡುವ ಸಂಭವವಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಎದುರು ಸೋತಿದ್ದ ಯಶವಂತ್‌ ಜಾದವ್‌ಗೆ ಮತ್ತೊಮೆ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಸತತ ಸೋಲಿನ ಅನುಕಂಪ ಅವರಿಗೆ ಈ ಬಾರಿ ಉಪಚುನಾವಣೆಯಲ್ಲಿ ಗೆಲುವನ್ನು ತಂದುಕೊಡಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ.
ಇನ್ನು ಬಾಗಲಕೋಟೆಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಂತಿಮವಾಗಿ ಪಕ್ಷದ ವೇದಿಕೆಯಲ್ಲಿ ಚರ್ಚೆ ನಂತರ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.

RELATED ARTICLES

Latest News