Monday, December 8, 2025
Homeರಾಜ್ಯಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ

Emotional tributes paid in the Legislative Assembly to dignitaries who passed away recently

ಬೆಂಗಳೂರು, ಡಿ.6- ಇತ್ತೀಚೆಗೆ ಅಗಲಿದ ಶಾಸಕ ಹೆಚ್‌.ವೈ.ಮೇಟಿ, ಆರ್‌.ವಿ.ದೇವರಾಜ್‌ ಮತ್ತು ಇತರ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್‌ ವಿಧಾನ ಸಭೆಯ ಹಾಲಿ ಸದಸ್ಯ ಎಚ್‌.ವೈ.ಮೇಟಿ , ಮಾಜಿ ಸದಸ್ಯರಾದ ಆರ್‌.ವಿ.ದೇವರಾಜ್‌, ಶಿವಶರಣಪ್ಪ ಗೌಡ ಪಾಟೀಲ್‌, ವೃಕ್ಷ ಮಾತೆ ಸಾಲುಮರದ ತಿಮಕ್ಕ, ಖ್ಯಾತ ಕಾದಂಬರಿಕಾರ ಎಸ್‌‍.ಎಲ್‌.ಭೈರಪ್ಪ, ಹಾಸ್ಯ ನಟ ಎಂ.ಎಸ್‌‍.ಉಮೇಶ್‌ ನಿಧನವಾಗಿದ್ದಾರೆ ಎಂದು ವಿಧಾನಸಭೆಗೆ ತಿಳಿಸಿದರು.

ಹಾಲಿ ಶಾಸಕ ಎಚ್‌.ವೈ.ಮೇಟಿ ಬಾಗಲಕೋಟೆಯ ತಿಮಾಪುರ ಗ್ರಾಮದಲ್ಲಿ 1946 ರಲ್ಲಿ ಜನಿಸಿದರು. ಕೃಷಿಕರಾಗಿದ್ದರು, ಮಂಡಲ ಪಂಚಾಯಿತಿ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಎಂ.ಎಸ್‌‍.ಐ.ಎಲ್‌ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ನಂತರ 10, 12 ಮತ್ತು 14ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. 1996ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸಂಸದರಾಗಿದ್ದರು, ಸಚಿವರಾಗಿ ಕೆಲಸ ಮಾಡಿದ್ದರು ಎಂದು ವಿವರಿಸಿದರು.

ಆರ್‌.ವಿ.ದೇವರಾಜ್‌ 1952 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಎ ಪದವೀಧರರಾಗಿದ್ದ ಅವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದರು. ಉತ್ತಮ ಸಂಘಟಕರು. 1989ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ, ನಂತರ 11ನೇ ವಿಧಾನಸಭೆಗೂ ಮರು ಆಯ್ಕೆಯಾಗಿದ್ದರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ 14ನೇ ವಿಧಾನಸಭೆಗೂ ಪ್ರವೇಶಿಸಿದ್ದರು. 2004ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕೆ.ಎಸ್‌‍.ಆರ್‌.ಟಿ.ಸಿ ಸಂಸ್ಥೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು ಎಂದು ವಿವರಿಸಿದ್ದರು.
ಶಿವಶರಣಪ್ಪಗೌಡಪಾಟೀಲ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹುಣಸಿಹಾಳ ಗ್ರಾಮದಲ್ಲಿ 1948 ರಲ್ಲಿ ಜನಿಸಿದರು. ಎಂಎ ಸ್ನಾತಕೋತ್ತರ ಪದವೀಧರರಾಗಿ, ಕೃಷಿಕರಾಗಿದ್ದರು. ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ತಾಲೂಕು ಬೋರ್ಡ್‌ ಅಧ್ಯಕ್ಷರಾಗಿ, ತುಂಗಭದ್ರಾ ಅಣೆಕಟ್ಟು ಮಂಡಳಿ ಮತ್ತು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1989 ಮತ್ತು 99ರಲ್ಲಿ ಯಲಬುರ್ಗಾ ಕ್ಷೇತ್ರದಿಂದ ಗೆದ್ದು, ಮತ್ತೆ 11ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ಹೇಳಿದರು.

ವೃಕ್ಷ ಮಾತೆ ಸಾಲುಮರದ ತಿಮಕ್ಕ 1911ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ್ದರು. ಮಕ್ಕಳಿಲ್ಲದ ದುಃಖ ಮರೆಯಲು ರಸ್ತೆ ಬದಿಯಲ್ಲಿ ಗಿಡಗಳನ್ನು ಬೆಳೆಸಲಾರಂಭಿಸಿದ್ದರು. ಬಿಂದಿಗೆಯಲ್ಲಿ ನಾಲ್ಕು ಕಿಲೋಮೀಟರ್‌ ದೂರದಿಂದ ನೀರು ತಂದು ಗಿಡಗಳನ್ನು ಮಕ್ಕಳಂತೆ ಪೋಷಿಸಿದರು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮಕ್ಕ ಎಂದು ಹೆಸರು ಪಡೆದಿದ್ದರು. ಅನಕ್ಷರಸ್ಥರಾಗಿದ್ದರೂ ಅವರ ಪರಿಸರ ಕಾಳಜಿ ಅಪಾರವಾಗಿತ್ತು. ಕೇಂದ್ರ ಸರ್ಕಾರದಿಂದ ಪೌರ ಪುರಸ್ಕಾರ, ಪದಶ್ರೀ, ಇಂದಿರಾ ಪ್ರಿಯದರ್ಶಿನಿ, ಕರ್ನಾಟಕ ಕಲ್ಪವಲ್ಲಿ, ರಾಜ್ಯೋತ್ಸವ, ನಾಡೋಜ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಸಾಲುಮರದ ತಿಮಕ್ಕ ಅವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿತ್ತು ಎಂದು ವಿವರಿಸಿದರು.ಎಸ್‌‍.ಎಲ್‌.ಭೈರಪ್ಪ ಅವರು 1931 ರಂದು ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಸತ್ಯ ಮತ್ತು ಸೌಂದರ್ಯ ಎಂಬ ಮಹಾ ಪ್ರಬಂಧಕ್ಕೆ ಪಿಎಚ್‌ ಡಿ ಪದವಿ ಪಡೆದಿದ್ದರು. ಹುಬ್ಬಳ್ಳಿಯ ಕಾಡ ಸಿದ್ದೇಶ್ವರ ಕಾಲೇಜು, ಗುಜರಾತಿನ ಸರ್ದಾರ್‌ ಪಟೇಲ್‌ ವಿಶ್ವವಿದ್ಯಾನಿಲಯ, ದೆಹಲಿಯ ಎನ್‌ ಸಿ ಇ ಆರ್‌ ಟಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಾಗಿದ್ದರು. ಸಮಗ್ರ ಅಧ್ಯಯನದ ಮೂಲಕ ಕಾದಂಬರಿ ರಚಿಸುವ ಅವರ ಶೈಲಿ ಜನ ಮೆಚ್ಚಿಗೆ ಪಡೆದಿತ್ತು. 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದರು. ಎಲ್ಲವೂ ಜನಪ್ರಿಯವಾಗಿದ್ದು ಕೆಲವು ಚಲನಚಿತ್ರಗಳಾಗಿಯೂ ನಿರ್ಮಾಣಗೊಂಡಿವೆ ಎಂದು ಆವರಣ ಮತ್ತು ಪರ್ವ ಕಾದಂಬರಿಗಳ ಓರಣದ ಬಗ್ಗೆ ಸಭಾಧ್ಯಕ್ಷರು ವಿವರಿಸಿದ್ದರು.
ಪದಶ್ರೀ, ಪದಭೂಷಣ, ಸರಸ್ವತಿ ಸಮಾನ, ಪಂಪ ಪ್ರಶಸ್ತಿ, ಎನ್‌ ಟಿ ಆರ್‌ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅತ್ಯಂತ ಸರಳ ವ್ಯಕ್ತಿತ್ವದ ಭೈರಪ್ಪ ತಮಗೆ ಸಂದ ಪ್ರಶಸ್ತಿಗಳ ಮೌಲ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದರು ಎಂದು ಗುಣಗಾನ ಮಾಡಿದರು.

ಚಲನಚಿತ್ರರಂಗದಲ್ಲಿ ಎಂ.ಎಸ್‌‍.ಉಮೇಶ್‌ ಜನಪ್ರಿಯ ಹಾಸ್ಯ ಕಲಾವಿದರಾಗಿದ್ದರು. 1940 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಕೆ ಹೀರಣ್ಣಯ್ಯ ನಾಟಕ ಮಂಡಳಿಯಿಂದ ಬಸವೇಶ್ವರರ ನಾಟಕದಲ್ಲಿ ಬಿಚ್ಚಳನ ಮಗನ ಪಾತ್ರದಲ್ಲಿ ನಟಿಸುವ ಮೂಲಕ ತಮ ನಾಲ್ಕನೇ ವರ್ಷಕ್ಕೆ ರಂಗಭೂಮಿಗೆ ಪ್ರವೇಶಿಸಿದರು. ಪಿಯಾನೋ ವಾದಕರಾಗಿ, ಕುಂಚ ಕಲಾವಿದರಾಗಿ, ಹಾರ್ಮೋನಿಯಂ ವಾದಕರಾಗಿ ಗುರುತಿಸಿಕೊಂಡಿದ್ದರು.

ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಒಟ್ಟು 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದರು. ಕಥಾಸಂಗಮ ಚಿತ್ರದ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರು. ಹಲವಾರು ಪ್ರಶಸ್ತಿ, ಸನಾನಗಳಿಗೆ ಭಾಜನರಾಗಿದ್ದರು ಎಂದು ವಿವರಿಸಿದರು.

ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಗಲಿದ ಗಣ್ಯರ ಗುಣಗಾನ ಮಾಡಿದರು. ವಿರೋಧ ಪಕ್ಷ ನಾಯಕ ಆರ್‌.ಅಶೋಕ್‌ ಮತ್ತಿತರರು ಧ್ವನಿಗೂಡಿಸಿದರು. ಮೌನಾಚರಣೆಯ ಮೂಲಕ ಸಂತಾಪ ಸೂಚನಾ ನಿರ್ಣಯ ಅಂಗೀಕರಿಸಲಾಯಿತು.

RELATED ARTICLES

Latest News