ಬೆಳಗಾವಿ,ಡಿ.9- ರಾಜ್ಯಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಮುನಿರತ್ನ, ಬಾಲಚಂದ್ರ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಮೇಲನೆ ಸದಸ್ಯರಾದ ರವಿಕುಮಾರ್, ನವೀನ್, ಭಾರತಿಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಭಾಗಿಯಾಗಿದ್ದರು.
ಬೆಳಗಾವಿಯ ಮಾಲಿನಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ರೈತರು ಭಾಗಿಯಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಮಾಲಿನಿ ಮೈದಾನದಿಂದ ರಾಷ್ಟ್ರೀಯ ಹೆದ್ದಾರಿ 4 ರ ಮೂಲಕ ಸುವರ್ಣ ಸೌಧ ಮುತ್ತಿಗೆ ಹಾಕಲು ಪ್ರಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ಕೊಡದೆ ರೈತರನ್ನು ವಶಕ್ಕೆ ಪಡೆದರು.
ತೊಲಗಲಿ ತೊಲಗಲಿ ಕಾಂಗ್ರೆಸ್ ಸರ್ಕಾರ ತೊಲಗಲಿ, ಛಾಟಿ ಏಟು ಛಾಟಿ ಏಟು ಕೊಡಲೇಬೇಕು ಛಾಟಿ ಏಟು ಎಂಬ ಧಿಕ್ಕಾರ ಘೋಷಣೆಗಳನ್ನು ಕೂಗಿದ ಪ್ರತಿಭಟನಾ ರೈತರು ತೊಗರಿಬೇಳೆ, ಮೆಕ್ಕೆ ಜೋಳವನ್ನು ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಸಿರು ಟವೆಲ್ ಹಾಗೂ ಹಳದಿ ಬಣ್ಣದ ರುಮಾಲು ಧರಿಸಿದ್ದ ಪ್ರತಿಭಟನಾ ನಿರತರು ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ದೇಶದಲ್ಲೇ ಅತೀ ಹೆಚ್ಚು ರೈತರು ಆತಹತ್ಯೆ ಮಾಡಿಕೊಂಡಿರುವ ರಾಜ್ಯವೆಂದರೆ ಕರ್ನಾಟಕ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಆತಹತ್ಯೆ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ. ಅನ್ನದಾತರ ಹಿತ ಕಾಪಾಡುವ ಬದಲು ಸಿಎಂ ಮತ್ತು ಡಿಸಿಎಂ ಕುರ್ಚಿ ಕದನದಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತಿರಲಿಲ್ಲ. ರೈತರು ರಸ್ತೆಗಿಳಿದು ಹೆದ್ದಾರಿಗಳನ್ನು ಬಂದ್ ಮಾಡಿ ಬಿಸಿ ಮುಟ್ಟಿಸಿದರು. ವಿಧಿಯಿಲ್ಲದೆ ಬೆಂಬಲ ಬೆಲೆ ನೀಡಿ ಖರೀದಿಸಿದರು.ರೈತರ ಆತಹತ್ಯೆಗಳು ನಿರಂತರವಾಗಿ ಮುಂದುವರೆಯುತ್ತಿದ್ದರೂ ಸರ್ಕಾರ ಮಾತ್ರ ಅವರನ್ನು ಕಣ್ಣೆತ್ತಿಯೂ ನೋಡದೇ ಕುರುಡಾಗಿದೆ ಎಂದು ಕಟಕಿಯಾಡಿದರು.
ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ರಾಜ್ಯಸರ್ಕಾರ ಕೇಂದ್ರದ ಮೇಲೆ ಪ್ರತಿಯೊಂದಕ್ಕೂ ಬೊಟ್ಟು ಮಾಡುತ್ತಿದೆ. ಮೆಕ್ಕೆಜೋಳಕ್ಕೆ ಎಂಎಸ್‌ಪಿ ಅಡಿ ಪ್ರತೀ ಕ್ವಿಂಟಾಲ್‌ಗೆ 2,400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೂ ಖರೀದಿ ಕೇಂದ್ರಗಳನ್ನು ತೆರೆಯದೆ ಕೇಂದ್ರದ ಮೇಲೆ ಬೊಟ್ಟು ಮಾಡುತ್ತದೆ. ಮೊದಲು ನೀವು ಖರೀದಿ ಕೇಂದ್ರಗಳನ್ನು ತೆರೆಯಿರಿ ಎಂದು ಆಗ್ರಹಿಸಿದರು.
ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಾವು ಯಾವುದೇ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿಲ್ಲ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ತೊಗರಿಬೇಳೆ ಮತ್ತು ಮೆಕ್ಕೆಜೋಳ ಖರೀದಿ ಮಾಡದೇ ರೈತರ ಹೊಟ್ಟೆಗೆ ಹೊಡೆಯುತ್ತಿದ್ದೀರಿ. ಒಂದು ಕಡೆ ನಮದು ರೈತಪರ ಸರ್ಕಾರ ಎನ್ನುತ್ತೀರಿ. ಮತ್ತೊಂದು ಕಡೆ ಅದೇ ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ. ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ರೈತರ ಪರವಾಗಿ 30 ಜಿಲ್ಲೆಗಳಲ್ಲಿ ಹೋರಾಟ ಮಾಡಿದ್ದೇನೆ. ಅವರಿಗೆ ನ್ಯಾಯ ಸಿಗಬೇಕೆಂಬುದು ನಮ ಒತ್ತಾಸೆ. ಪ್ರತಿ ಕ್ವಿಂಟಾಲ್ ಕಬ್ಬಿಗೆ 3400 ರೂ. ನಿಗದಿಪಡಿಸಿದೆ. ನೀವು ಅಷ್ಟು ಹಣ ಕೊಟ್ಟಿದ್ದರೆ ರೈತರು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುತ್ತಿದ್ದರಾ? ಕೇಂದ್ರ ಸರ್ಕಾರದ ಎಫ್‌ಆರ್‌ಪಿ ಪ್ರಕಾರವೇ ರೈತರಿಗೆ ನ್ಯಾಯ ಕೊಡಿಸಿದ್ದರೆ ಈ ಸಮಸ್ಯೆ ಬರುತ್ತಿತ್ತೇ? ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ರು ರೈತರ ಪರವಾಗಿದ್ದಾರೋ ಅಥವಾ ಸಕ್ಕರೆ ಕಾರ್ಖಾನೆಯ ಮಾಲೀಕರ ಪರವಾಗಿದ್ದಾರೋ ಎಂದು ತರಾಟೆಗೆ ತೆಗೆದುಕೊಂಡರು.
ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಿರಿ ಎಂದರೆ ಶಾಸಕರ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಹೊರಟಿದೆ. ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿಯಾಗಿ ಒಂದೂವರೆ ವರ್ಷ ಕಳೆದಿದೆ. ಈಗಲೂ ಅದನ್ನು ದುರಸ್ತಿ ಮಾಡಿಲ್ಲ. ನಿಮಗೆ ರೈತರ ಸಮಸ್ಯೆಗಿಂತ ಯಾವ ಶಾಸಕರನ್ನು ಯಾವ ಕಡೆ ಸೆಳೆಯಬೇಕು. ಕುರ್ಚಿ ಹೇಗೆ ಭದ್ರ ಪಡಿಸಬೇಕು. ಇದರಲ್ಲೇ ನಿರತರಾಗಿದ್ದಾರೆ ಎಂದು ಸಿಡಿಮಿಡಿಗೊಂಡರು.
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಇದು ರೈತ ವಿರೋಧಿ ಸರ್ಕಾರ. ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯದೇ ಅವರಿಗೆ ವಂಚನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಟಿ ಕೋಳಿ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ. ಇಡೀ ಸರ್ಕಾರ ಹುಚ್ಚಾಟದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
