Sunday, December 14, 2025
Homeರಾಜ್ಯಪೊಲೀಸ್‌‍ ವೇಷದಲ್ಲಿ ಬಂದು ದರೋಡೆ ಮಾಡಿ ಪರಾರಿಯಾಗಿದ್ದ ನಕಲಿ ಪಿಎಸ್‌‍ಐ ಸೇರಿ ನಾಲ್ವರ ಬಂಧನ

ಪೊಲೀಸ್‌‍ ವೇಷದಲ್ಲಿ ಬಂದು ದರೋಡೆ ಮಾಡಿ ಪರಾರಿಯಾಗಿದ್ದ ನಕಲಿ ಪಿಎಸ್‌‍ಐ ಸೇರಿ ನಾಲ್ವರ ಬಂಧನ

Four arrested including fake PSI who came in police uniform and robbed and fled

ಬೆಂಗಳೂರು,ಡಿ.14- ಒಂಟಿ ಮನೆಗೆ ನುಗ್ಗಿ ನಾವು ಕ್ರೈಮ್‌ ಪೊಲೀಸರೆಂದು ಹೆದರಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೀಯಾ ಎಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಮತ್ತಿಕೆರೆ ನಿವಾಸಿಗಳಾದ ಮಲ್ಲಿಕಾರ್ಜುನ ಅಲಿಯಾಸ್‌‍ ಮಲ್ಲಿ ಅಲಿಯಾಸ್‌‍ ಪಿಎಸ್‌‍ಐ ಮಲ್ಲಣ್ಣ(27), ಪ್ರಮೋದ್‌(30), ವಿನಯ್‌(36) ಹಾಗೂ ಬಾಗಲಗುಂಟೆಯ ಹೃತ್ವಿಕ್‌ ಬಂಧಿತ ಆರೋಪಿಗಳು. ಆರೋಪಿ ಮಲ್ಲಿಕಾರ್ಜುನ ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನವನಾಗಿದ್ದು, ಈ ಹಿಂದೆ ಪೊಲೀಸ್‌‍ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗಾಗಿ
ಕೋಚಿಂಗ್‌ ಪಡೆದು ಪರೀಕ್ಷೆ ಬರೆದಿದ್ದು, ಅದರಲ್ಲಿ ಆಯ್ಕೆಯಾಗಿರಲಿಲ್ಲ.

ಪಿಎಸ್‌‍ಐನಂತೆ ಸಮವಸ್ತ್ರ ಹಾಕಿಕೊಂಡು ಜನರನ್ನು ಹೆದರಿಸಿ ಹಣ ವಸೂಲಿ ಮಾಡಲು ನಿರ್ಧರಿಸಿ ಅದಕ್ಕೆ ಬೇಕಾದಂತಹ ಶೂ, ಬೆಲ್ಟ್ ನ್ನು ಖರೀದಿಸಿ ಕಾಮಾಕ್ಷಿಪಾಳ್ಯದ ಟೈಲರ್‌ ಅಂಗಡಿಯಲ್ಲಿ ಯೂನಿಫಾರಂ ಹೊಲೆಸಿದ್ದಾನೆ. ನಂತರದ ದಿನಗಳಲ್ಲಿ ತನ್ನ ಸ್ನೇಹಿತರಾದ ಋತ್ವಿಕ್‌ ಜೊತೆ ಸೇರಿ ಒಂಟಿ ಮನೆಯಲ್ಲಿ ವಾಸವಿರುವ ವ್ಯಕ್ತಿ ಬಗ್ಗೆ ತಿಳಿದುಕೊಂಡು ಅವರ ಬಳಿ ಹಣ ಇರುವ ಬಗ್ಗೆ ಮಾಹಿತಿ ಪಡೆದು ದರೋಡೆಗೆ ಸಂಚು ರೂಪಿಸಿದ್ದಾರೆ.

ಅದರಂತೆ ಮಲ್ಲಿಕಾರ್ಜುನ ಪೊಲೀಸ್‌‍ ಸಮವಸ್ತ್ರ ಧರಿಸಿ ಕೈಯಲ್ಲಿ ಲಾಠಿ ಹಿಡಿದು, ಸ್ನೇಹಿತರಾದ ಋತ್ವಿಕ್‌, ಪ್ರಮೋದ್‌ ಹಾಗೂ ವಿನಯ್‌ ಜೊತೆ ಸೇರಿ ನರಸೀಪುರ ಲೇಔಟ್‌ನ ಒಂಟಿ ಮನೆಯಲ್ಲಿ ವಾಸವಿರುವ ನವೀನ್‌ ಅವರ ಮನೆಗೆ ಡಿ.7ರಂದು ರಾತ್ರಿ ನುಗ್ಗಿ ತಾವು ಕ್ರೈಮ್‌ ಪೊಲೀಸರೆಂದು ಹೇಳಿ, ನೀನು ಈ ಏರಿಯಾದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೀಯ ಮನೆಯನ್ನು ಪರಿಶೀಲಿಸಬೇಕು ಎಂದು ಹೆದರಿಸಿದ್ದಾರೆೆ.

ನವೀನ್‌ ಅವರನ್ನು ಮನೆಯ ಒಂದು ಕಡೆ ಕೂರಿಸಿ ಮನೆಯನ್ನೆಲ್ಲ ಸರ್ಚ್‌ ಮಾಡುವಂತೆ ನಟಿಸಿ ಕೈಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಲಾಠಿ ಮತ್ತು ಕಬ್ಬಿಣದ ರಾಡ್‌ನಿಂದ ವಿನಾಕಾರಣ ಹೊಡೆದಿದ್ದಾರೆ. ಮನೆಯಲ್ಲಿದ್ದ 53 ಸಾವಿರ ಹಣ, ಪರ್ಸ್‌ನಲ್ಲಿದ್ದ 2 ಸಾವಿರ ಹಣ ಕಿತ್ತುಕೊಂಡಿದ್ದಲ್ಲದೆ ನವೀನ್‌ ಅವರ ಬ್ಯಾಂಕ್‌ ಖಾತೆಯಲ್ಲಿದ್ದ 87 ಸಾವಿರ ಹಣವನ್ನು ಮೊಬೈಲ್‌ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ವಿದ್ಯಾರಣ್ಯಾಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಯಲಹಂಕ ಉಪವಿಭಾಗದ ಎಸಿಪಿ ನರಸಿಂಹಮೂರ್ತಿ, ಇನ್‌ಸ್ಪೆಕ್ಟರ್‌ ಶಿವಸ್ವಾಮಿ, ಸಬ್‌ ಇನ್‌ಸ್ಪೆಕ್ಟರ್‌ ಇಬ್ರಾಹಿಂ ಮತ್ತು ಹರೀಶ್‌ಕುಮಾರ್‌ ಹಾಗೂ ಅಪರಾದ ವಿಭಾಗದ ಸಿಬ್ಬಂದಿ ಒಳಗೊಂಡ ತಂಡ ಆರೋಪಿಗಳ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ.

ನಂತರ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿ 45 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

RELATED ARTICLES

Latest News