ತುಮಕೂರು,ಜ.9- ಅಯ್ಯಪ್ಪ ಸ್ವಾಮಿ ಭಕ್ತರಿದ್ದ ಕ್ರೂಸರ್ ವಾಹನ ರಸ್ತೆ ಬದಿ ನಿಂತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮ ಬಾಲಕಿ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕೊಪ್ಪಳ ಜಿಲ್ಲೆ ಕಾಕನೂರು ತಾಲ್ಲೂಕಿನ ನಿವಾಸಿಗಳಾದ ಸಾಕ್ಷಿ (7), ವೆಂಕಟೇಶಪ್ಪ (30), ಮಾರತಪ್ಪ (35) ಹಾಗೂ ಗವಿಸಿದ್ದಪ್ಪ (40) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಪ್ರಶಾಂತ್ (32), ಪ್ರವೀಣ್‌ಕುಮಾರ್ (28), ರಾಜಪ್ಪ (45), ಉಲಗಪ್ಪ (36), ರಾಕೇಶ್ (24), ತಿರುಪತಿ (33), ಶ್ರೀನಿವಾಸ್ (32) ಅವರನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಜ.5 ರಂದು ಕ್ರೂಸರ್ ವಾಹನದಲ್ಲಿ ಶಬರಿ ಮಲೆಗೆ ಚಾಲಕ ಸೇರಿದಂತೆ 11 ಮಂದಿ ಮಾಲಾಧಾರಿಗಳು ಕಾಕನೂರಿನಿಂದ ತೆರಳಿದ್ದು, ಜ.7 ರಂದು ಶಬರಿ ಮಲೆ ತಲುಪಿ ಅಯ್ಯಪ್ಪನ ದರ್ಶನ ಪಡೆದು ನಿನ್ನೆ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೋಗಿದ್ದಾರೆ.
ಮಧ್ಯಾಹ್ನ ಪಳನಿಯಿಂದ ಹೊರಟು ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಕೊಪ್ಪಳಕ್ಕೆ ತೆರಳುತ್ತಿದ್ದಾಗ ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೋರ ಸಮೀಪದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಬರುತ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಲಾರಿಗೆ ಅತಿ ವೇಗವಾಗಿ ಬಂದ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ಅಪ್ಪಳಿಸಿದ ಪರಿಣಾಮ ಭೀಕರ ಅಪಘಾತವಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮತ್ತೊಬ್ಬರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಕೋರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವಲ್ಲಿ ನೆರವಾದರು.ನಾಲ್ವರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಸಾಗರ್ ಮುಸ್ಕಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಡಿವೈಎಸ್ಪಿ ಚಂದ್ರಶೇಖರ್ ಘಟನಾ ಸ್ಥಳಕ್ಕೆ ದಾವಿಸಿ, ಪರಿಶೀಲಿಸಿದ್ದಾರೆ.
ತಂದೆಯ ರೋಧನೆ:
ಅಪಘಾತದಲ್ಲಿ ಮಗಳು ಸಾಕ್ಷಿಯನ್ನು ಕಳೆದುಕೊಂಡ ತಂದೆ ಉಲಗಪ್ಪ ಅವರ ರೋಧನೆ ಮುಗಿಲುಮುಟ್ಟಿತ್ತು. ಅಕ್ಕಪಕ್ಕದ ಊರಿನ ನಾವು 10 ಜನ ಒಟ್ಟಿಗೆ ಮಾಲೆ ಹಾಕಿದ್ದೇವು. ಮಗಳು ನನ್ನ ಪಕ್ಕದಲ್ಲೇ ಮಲಗಿದ್ದಳು. ಅಪಘಾತ ಹೇಗಾಯಿತು ಗೊತ್ತಿಲ್ಲ. ಒಂದನೇ ತರಗತಿ ಓದುತ್ತಿದ್ದ ಮಗಳನ್ನು ಎರಡನೇ ಬಾರಿ ಶಬರಿ ಮಲೆಗೆ ಕರೆದೊಯ್ದಿದ್ದೆವು. ಒಳ್ಳೆಯದಾಗಲಿ ಎಂದು ಅಯ್ಯಪ್ಪನ ದರ್ಶನ ಮಾಡಿ ವಾಪಸ್ ಆಗುತ್ತಿದ್ದಾಗ ಹೀಗಾಗಿದೆ ಎಂದು ಅವರು ಕಣ್ಣೀರು ಹಾಕಿದ್ದಾರೆ.
