Monday, January 12, 2026
Homeಇದೀಗ ಬಂದ ಸುದ್ದಿಜಿ ರಾಮ್‌ ಜಿ ಜಾಗೃತಿ ಅಭಿಯಾನ : ಬಿವೈವಿಗೆ ಮತ್ತೊಂದು ಅಗ್ನಿ ಪರೀಕ್ಷೆ

ಜಿ ರಾಮ್‌ ಜಿ ಜಾಗೃತಿ ಅಭಿಯಾನ : ಬಿವೈವಿಗೆ ಮತ್ತೊಂದು ಅಗ್ನಿ ಪರೀಕ್ಷೆ

G. Ram G Awareness Campaign: Another Test for BY Vijayendra

ಬೆಂಗಳೂರು,ಜ.12- ಮೊದಲೇ ಒಡೆದ ಮನೆಯಂತಾ ಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮತ್ತೊಂದು ಹೊಸ ಅಗ್ನಿಪರೀಕ್ಷೆ ಎದುರಾಗಿದೆ. ಅದೇನೆಂದರೆ ಕೇಂದ್ರ ಸರ್ಕಾರ ಇತ್ತೀಚಿಗೆ ಸಂಸತ್ತಿನ ಉಭಯ ಸದನಗಳಲ್ಲಿ ನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ ವಿ ಬಿ ಜಿ ರಾಮ್‌ ಜಿ) ಎಂಬ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿಯ ಯೋಜನೆಗೆ ಪ್ರತಿಪಕ್ಷ ಕಾಂಗ್ರೆಸ್‌‍ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ದೊಡ್ಡ ಜನಾಂದೋಲನವನ್ನು ರೂಪಿಸಲು ಮುಂದಾಗಿದೆ.

ಇದರ ಬೆನ್ನಲ್ಲೇ, ಬಿಜೆಪಿ ಕೂಡ ಕಾಂಗ್ರೆಸ್‌‍ಗೆ ಪರ್ಯಾಯವಾಗಿ ಜ.15ರಿಂದ ಫೆ.28 ರವರೆಗೆ ರಾಜ್ಯದಾದ್ಯಂತ ಜನಜಾಗೃತಿ ಅಭಿಯಾನವನ್ನು ನಡೆಸಲು ತೀರ್ಮಾನಿಸಿದೆ. ಬಿಜೆಪಿ ಸಾರಥ್ಯ ವಹಿಸಿರುವ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಮುನಿಸಿಕೊಂಡಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಜಾಗೃತಿ ಅಭಿಯಾನವನ್ನು ಮುನ್ನಡೆಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌‍ಗೆ ಪರ್ಯಾಯವಾಗಿ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ನಡೆಸಿ ತಿರುಗೇಟು ನೀಡಬೇಕೆಂದು ರಾಷ್ಟ್ರೀಯ ನಾಯಕರು ರಾಜ್ಯ ಘಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದರ ಮೊದಲ ಭಾಗವಾಗಿಯೇ ಕಳೆದ ಶನಿವಾರ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕರಾದ ಆರ್‌ ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರ ಜೊತೆ ವಿಜಯೇಂದ್ರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನಮಲ್ಲಿ ಯಾವುದೇ ರೀತಿಯ ಒಡಕು ಇಲ್ಲ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದರು. ಇದೀಗ ಜ.15ರಿಂದ ಆರಂಭವಾಗಲಿರುವ ಜನಜಾಗೃತಿ ಅಭಿಯಾನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸವಾಲು ರಾಜ್ಯಾಧ್ಯಕ್ಷರ ಮೇಲೆ ಇದೆ. ಬಿಜೆಪಿಯಲ್ಲಿ ಕೆಲವರನ್ನು ಹೊರತುಪಡಿಸಿದರೆ ಈಗಲೂ ಕೂಡ ವಿಜಯೇಂದ್ರ ನಾಯಕತ್ವದ ವಿರುದ್ಧ ಅನೇಕರು ಅಪಸ್ವರ ತೆಗೆದಿದ್ದಾರೆ.

ಪಕ್ಷದಲ್ಲಿ ಹಿಡಿತ ಸಾಧಿಸಿಕೊಳ್ಳಲು ಹಾಗೂ ರಾಜಕೀಯವಾಗಿ ಬೆಳೆಯಲು ಇತರ ಮುಖಂಡರ ವಿಶ್ವಾಸ ಅತ್ಯಂತ ಅಗತ್ಯವಾಗಿದೆ. ಸದ್ಯ ವಿಜಯೇಂದ್ರ ಪರ ಹಾಗೂ ವಿರುದ್ಧದ ಬಣ ಬಿಜೆಪಿಯಲ್ಲಿದೆ. ಹೈಕಮಾಂಡ್‌ ಘೋಷಣೆ ಮಾಡದಿದ್ದರೂ ಯಡಿಯೂರಪ್ಪ ಶಿಕಾರಿಪುರಕ್ಕೆ ವಿಜಯೇಂದ್ರ ಉತ್ತರಾಧಿಕಾರಿ ಎಂದಿದ್ದರೂ ಇದಕ್ಕೆ ಬಿಜೆಪಿ ಪಕ್ಷದಲ್ಲಿರುವವರು ಎಷ್ಟು ಜನರು ಸಮತಿ ಸೂಚಿಸುತ್ತಾರೆ ಎಂಬುದು ಮುಖ್ಯವಾಗಿದೆ.

ಈ ನಿಟ್ಟಿನಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಇತರ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ವಿಜಯೇಂದ್ರ ಮುಂದಿರುವ ಸವಾಲಾಗಿದೆ. ಒಟ್ಟಿನಲ್ಲಿ ಈ ಎಲ್ಲ ಅಡೆತಡೆಗಳನ್ನು ಮೀರಿ ತಂದೆ ಕೊಟ್ಟ ಉತ್ತರಾಧಿಕಾರಿ ಪಟ್ಟವನ್ನು ವಿಜಯೇಂದ್ರ ಹೇಗೆ ನಿಭಾಯಿಸುತ್ತಾರೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.

ಬಿಜೆಪಿಯಲ್ಲಿ ಹೈಕಮಾಂಡ್‌ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಸಂಘ, ಪಕ್ಷದ ಸಂಘಟನೆಯನ್ನು ಮೀರಿ ಯಾರೂ ದೊಡ್ಡವರಲ್ಲ ಎಂಬ ವಾತಾವರಣ ಕೇಸರಿ ಪಕ್ಷದಲ್ಲಿದೆ. ಪಕ್ಷದ ಚೌಕಟ್ಟನ್ನು ಮೀರಿ ನಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಕೇಡರ್‌ ಆಧರಿತ ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸುಜೊತೆಗೆ ಸಂಘಟನೆಯ ಬಲ, ಹೈಕಮಾಂಡ್‌ ಆಶೀರ್ವಾದವೂ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ಮನಗೆಲ್ಲುವುದು ಬಿ.ಎಸ್‌‍.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮೇಲಿರುವ ದೊಡ್ಡ ಸವಾಲಾಗಿದೆ.

ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವದ ಕಾರಣದಿಂದಾಗಿ ಬಹುತೇಕ ಲಿಂಗಾಯತ ಸಮುದಾಯ ಬಿಜೆಪಿ ಜೊತೆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಪಕ್ಷ ನಡೆಸಿಕೊಂಡ ರೀತಿ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಹೊರತಾಗಿ ಲಿಂಗಾಯತ ಸಮುದಾಯಕ್ಕೆ ಪ್ರಬಲ ನಾಯಕತ್ವ ನೀಡುವ ಮತ್ತೋರ್ವ ಮುಖಂಡ ಬಿಜೆಪಿಯಲ್ಲಿಲ್ಲ. ಬಸವರಾಜ ಬೊಮಾಯಿ, ಮುರುಗೇಶ್‌ ನಿರಾಣಿ, ಅವರುಗಳ್ಯಾರೂ ಮಾಸ್‌‍ ಲೀಡರ್‌ ಆಗಿ ಹೊರ ಹೊಮಲು ಸಾಧ್ಯವಾಗಿಲ್ಲ. ಆದರೆ ಭವಿಷ್ಯದಲ್ಲಿ ಬಿಎಸ್‌‍ವೈ ಪುತ್ರ ವಿಜಯೇಂದ್ರಗೆ ಆ ಅವಕಾಶವೂ ಇದೆ. ಆದರೆ ಇದನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗಿದೆ.

ವಿಜಯೇಂದ್ರ ಅವರ ಮುಂದೆ ಹಲವು ಸವಾಲುಗಳು ಇರುವುದಂತೂ ನಿಜ. ಅವರ ಪಕ್ಷದಲ್ಲಿನ ಹಿರಿಯರ ವಿಶ್ವಾಸವನ್ನು ಗಳಿಸಿಕೊಳ್ಳಬೇಕಿದೆ. ಲಿಂಗಾಯತರಂತೆ ಬಿಜೆಪಿಯಿಂದ ಚದುರಿ ಹೋಗಿರುವ ಎಡಗೈ ದಲಿತರು, ವಾಲೀಕಿ ಅವರಲ್ಲದೆ ಬೊಮಾಯಿ ಸರ್ಕಾರದ ಒಳ ಮೀಸಲಾತಿ ಪರಿಣಾಮವಾಗಿ ಮುನಿಸಿಕೊಂಡಿರುವ ಬಂಜಾರ ಮತ್ತಿತರ ಬಿಜೆಪಿಯ ಸಾಂಪ್ರದಾಯಕ ಮತಗಳನ್ನು ವಾಪಸ್‌‍ ಸೆಳೆಯಬೇಕಿದೆ.

ರಾಜ್ಯಾದ್ಯಂತ ಕಾರ್ಯಕರ್ತರನ್ನು ಹುರಿದುಂಬಿಸಲು ಅಣ್ಣಾಮಲೈ ಮಾದರಿಯಲ್ಲಿ ಯಾವುದಾದರೂ ಜ್ವಲಂತ ಸಮಸ್ಯೆ ಕುರಿತು ಪಾದಯಾತ್ರೆಯನ್ನು ನಡೆಸಬೇಕಾದೀತು. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಎಂಬ ಈ ಹೊತ್ತಿನ ಬಲಾಢ್ಯ ನಾಯಕನನ್ನು ಅನಾಮತ್ತಾಗಿ ಎದುರಿಸಲು ಜೆಡಿಎಸ್‌‍ ನಾಯಕ ಹೆಚ್‌.ಡಿ .ಕುಮಾರಸ್ವಾಮಿಯವರ ಜೊತೆ ವಿಜಯೇಂದ್ರ ಯಾವ ರೀತಿ ಜಂಟಿ ಹೋರಾಟವನ್ನು ರೂಪಿಸುತ್ತಾರೆ ಎನ್ನುವುದನ್ನು ಕುತೂಹಲದಿಂದ ನಿರೀಕ್ಷಿಸಲಾಗುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೆ ವಿಜಯೇಂದ್ರ ಅವರ ನೇಮಕದಿಂದ ರಾಜ್ಯ ಬಿಜೆಪಿಗೆ ಮಿಶ್ರ ಫಲ ಕಾದಿರುವಂತಿದೆ.

RELATED ARTICLES

Latest News