ಬೆಂಗಳೂರು,ಜ.10- ಪರಿಸರ ರಕ್ಷಣೆ ಮಾಡದಿದ್ದರೆ ಮುಂದೆ ದೊಡ್ಡ ಮಟ್ಟದ ಗಂಡಾಂತರವನ್ನು ಎದುರಿಸಬೇಕಾಗುತ್ತದೆ. ಉದ್ಯಾನ ನಗರಿಯಾಗಿದ್ದ ಬೆಂಗಳೂರು ಇದೀಗ ಅದ್ವಾನ ನಗರವಾಗಿದೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಫಸ್ಟ್ ಸರ್ಕಲ್ ಅರಮನೆ ಮೈದಾನದಲ್ಲಿಂದು ಹಮಿಕೊಂಡಿದ್ದ ಉದ್ಯಮಿ ಒಕ್ಕಲಿಗ ಎಕ್ಸ್ ಪೋ ಅಂಗವಾಗಿ ಆಯೋಜಿಸಿದ್ದ ಕೃಷಿ ಉದ್ಯಮಶೀಲತೆ ಮತ್ತು ರಫ್ತು ಆಧಾರಿತ ಕೃಷಿಯಲ್ಲಿನ ವಿಫುಲ ಅವಕಾಶಗಳು ಹಾಗೂ ಜಾಗತಿಕ ಮಾರುಕಟ್ಟೆಯ ಸಾಮರ್ಥ್ಯ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಪಶ್ಚಿಮಘಟ್ಟ ಜೀವವೈವಿಧ್ಯಗಳಲ್ಲಿ ಒಂದಾಗಿದ್ದು, ಅದರ ಉಳಿವಿಗೆ ಹೋರಾಟವಾಗುತ್ತಿದೆ. ಆದರೆ ಬಯಲುಸೀಮೆಯ ಜನರು ಪರಿಸರ ರಕ್ಷಣೆಗೆ ಹೋರಾಟ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದಲ್ಲಿ 22 ವಿಷಪೂರಿತ ನಗರಗಳಿವೆ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಅನಾಹುತವನ್ನು ಮುಂದೆ ಎದುರಿಸಬೇಕಾಗುತ್ತದೆ. ನಿಸರ್ಗದಿಂದ ನಾವು ಬದುಕಬೇಕಾಗಿದೆ. ಬೆಳೆ ಬೆಳೆಯುವುದಕ್ಕೆ ನೀರಿರಲಿ, ಕುಡಿಯುವುದಕ್ಕೂ ಮುಂದೆ ನೀರು ಸಿಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಿಸರ್ಗದ ರಕ್ಷಣೆಗೆ ಎಲ್ಲರೂ ದನಿ ಎತ್ತಬೇಕಿದೆ ಎಂದು ಹೇಳಿದರು.
ನಿಸರ್ಗ ಹಾಳಾಗುತ್ತಿರುವುದನ್ನು ಕಣ್ಣಿಂದ ನೋಡಿ ಮೌನವಾಗಿರುವುದು ಒಳ್ಳೆಯದಲ್ಲ. ಪರಿಸರ ಹಾಳಾದರೆ ಯಾರೂ ಉಳಿಯುವುದಿಲ್ಲ. ಒಕ್ಕಲಿಗರು ಒಕ್ಕಲುತನದ ಜೊತೆಗೆ ಉದ್ದಿಮೆಯತ್ತಲೂ ಗಮನ ಹರಿಸುವುದು ಒಳ್ಳೆಯದು ಎಂದರು.
ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯಾಧಿಕಾರಿ ಡಾ.ಹನುಮಂತೇಗೌಡ ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಈರುಳ್ಳಿ ಮತ್ತು ಟೊಮ್ಯಾಟೊ ನಂತರ ತೆಂಗು ಪ್ರಮುಖ ಪಾತ್ರ ವಹಿಸುತ್ತಿದೆ. ದ.ಭಾರತದ ರಾಜ್ಯಗಳಲ್ಲಿ ಶೇ.90 ರಷ್ಟು ತೆಂಗನ್ನು ಉತ್ಪಾದಿಸಲಾಗುತ್ತಿದೆ. ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಅತೀ ಹೆಚ್ಚು ತೆಂಗು ಬೆಳೆಯಲಾಗುತ್ತಿದ್ದು, ಕಲ್ಪತರು ನಾಡು ಎಂದು ಕರೆಯಲಾಗುತ್ತಿದೆ ಎಂದರು.
ಕರಟಕ್ಕೆ ಭಾರೀ ಬೇಡಿಕೆ :
ತೆಂಗಿನ ಕರಟಕ್ಕೆ 7 ರೂ.ಗಳಿಂದ 30 ರೂ. ತಲುಪಿದೆ. ಕರಟಕ್ಕಿರುವ ಬೇಡಿಕೆಯಲ್ಲಿ ಶೇ.25 ರಷ್ಟು ಮಾತ್ರ ಪೂರೈಸಲಾಗುತ್ತಿದೆ. ಶೇ.70 ರಿಂದ 80 ರಷ್ಟು ಕಚ್ಚಾ ಸಾಮಗ್ರಿ ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ. ತಮಿಳುನಾಡಿನಲ್ಲಿ ಚಾರ್‌ಕೋಲ್ ಉದ್ದಿಮೆಗಳಿವೆ. ಅವು ಚಾರ್‌ಕೋಲ್ ಅನ್ನು ರಫ್ತು ಮಾಡುತ್ತಿವೆ. ಕರ್ನಾಟಕದಲ್ಲಿ ಆ ಮಟ್ಟದಲ್ಲಿ ಉದ್ದಿಮೆಗಳು ಬೆಳೆದಿಲ್ಲ ಎಂದು ಹೇಳಿದರು.
ಹಲವು ಗಣ್ಯರು ಹಾಗೂ ವಿಷಯ ತಜ್ಞರು ಕೃಷಿ ಸಂಬಂಧಿ ಉದ್ದಿಮೆಗಳ ಬಗ್ಗೆ ಬೆಳಕು ಚೆಲ್ಲಿದರು. ಸರ್ಕಾರದಿಂದ ದೊರೆಯುವ ಸಹಾಯಧನ ಮತ್ತು ಕೃಷಿಸಂಬಂಧಿ ಉದ್ದಿಮೆಗಳ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು.
ವೇದಿಕೆಯಲ್ಲಿ ಫಸ್ಟ್ ಸರ್ಕಲ್‌ನ ಮುಖ್ಯ ಮಾರ್ಗದರ್ಶಕ ಜಯರಾಂ ರಾಯಪುರ, ಫಸ್ಟ್ ಸರ್ಕಲ್‌ನ ಅಧ್ಯಕ್ಷ ಮುನಿರಾಜು, ಬೆಂಗಳೂರು ಕೃಷಿ ವಿವಿಯ ಉಪಕುಲಪತಿ ಸುರೇಶ್, ಮಂಡ್ಯ ಕೃಷಿ ವಿವಿಯ ವಿಶೇಷ ಅಧಿಕಾರಿ ಅನಿಲ್‌ಕುಮಾರ್, ರಾಜಶೇಖರ್‌ಗೌಡ, ಮಧುಮತಿ ಮತ್ತಿತರ ಗಣ್ಯರಿದ್ದರು.
