Tuesday, December 23, 2025
Homeರಾಜ್ಯಚಿನ್ನ, ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಏರಿಕೆ

ಚಿನ್ನ, ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಏರಿಕೆ

Gold, silver prices hit all-time record highs

ಬೆಂಗಳೂರು,ಡಿ.23- ನಿರಂತರ ಏರಿಕೆಯಿಂದಾಗಿ ಚಿನ್ನ, ಬೆಳ್ಳಿ ಬೆಲೆಯು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.ಚಿನಿವಾರಪೇಟೆಯಲ್ಲಿ ಹಳದಿ ಲೋಹ ಎಂದೇ ಪರಿಗಣಿಸುವ ಚಿನ್ನದ ಬೆಲೆ ನಿರಂತರ ಏರಿಕೆ ಕಾಣುತ್ತಿದೆ. ಅದಕ್ಕೆ ಪೈಪೋಟಿ ನೀಡುವಂತೆ ಬೆಳ್ಳಿಧಾರಣೆಯು ಗಗನಮುಖಿಯಾಗಿ ಏರಿಕೆಯಾಗುತ್ತಿದ್ದು, ಆಭರಣಪ್ರಿಯರ ತಲೆಬಿಸಿ ಮಾಡಿದೆ.

ಇಂದು ಪ್ರತೀ ಗ್ರಾಂ ಚಿನ್ನಕ್ಕೆ (24 ಕ್ಯಾರೆಟ್‌) 240 ರೂ. ಏರಿಕೆಯಾಗಿದ್ದು, ಒಟ್ಟಾರೆಯಾಗಿ 13,855 ರೂ.ಗೆ ತಲುಪಿದೆ. ನಿನ್ನೆ ಕೂಡ 197 ರೂ. ಏರಿಕೆಯಾಗಿತ್ತು.22 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂ.ಗೆ 220 ರೂ. ಏರಿಕೆಯಾಗಿದ್ದು, ಇಂದು 12,700 ರೂ.ಗೆ ತಲುಪಿದೆ.ಡಿಸೆಂಬರ್‌ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಚಿನ್ನದ ಧಾರಣೆ ಇಂದು ಸಾರ್ವಕಾಲಿಕ ದಾಖಲೆ ಬರೆದಿದೆ.

ಹೂಡಿಕೆದಾರರು ಹೆಚ್ಚಾಗಿ ಚಿನ್ನದ ಮೇಲೆ ಬಂಡವಾಳ ಹೂಡುತ್ತಿರುವುದು ಹಾಗೂ ವಿವಿಧ ರಾಷ್ಟ್ರಗಳು ಕೇಂದ್ರೀಯ ಬ್ಯಾಂಕ್‌ಗಳು ಹೆಚ್ಚಾಗಿ ಚಿನ್ನ ಖರೀದಿಸುತ್ತಿರುವುದು ಬೆಲೆ ಏರಿಕೆಗೆ ಕಾರಣ ಎಂಬ ವ್ಯಾಖ್ಯಾನ ಮಾಡಲಾಗುತ್ತಿದೆ. ಜೊತೆಗೆ ಆಭರಣ ಪ್ರಿಯರು ಕೂಡ ಬೆಲೆ ಏರಿಕೆಯಾದರೂ ಖರೀದಿ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಚಿನ್ನದ ಧಾರಣೆ ನಿರಂತರವಾಗಿ ಏರಿಕೆಯತ್ತಲೇ ಸಾಗುತ್ತಿದೆ.

ಚಿನ್ನದಂತೆಯೇ ಬೆಳ್ಳಿ ಧಾರಣೆಯೂ ನಿರಂತರ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚಾಗಿದೆ. ಇಂದು ಪ್ರತೀ ಗ್ರಾಂ ಬೆಳ್ಳಿಗೆ 4 ರೂ. ಹೆಚ್ಚಳವಾಗಿದ್ದು, 223 ರೂ.ಗೆ ತಲುಪಿದೆ. ನಿನ್ನೆ ಕೂಡ 5 ರೂ.ನಷ್ಟು ಹೆಚ್ಚಳವಾಗಿತ್ತು.ಚಿನ್ನದಂತೆಯೇ ಡಿಸೆಂಬರ್‌ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಬೆಳ್ಳಿಯ ಧಾರಣೆ ಈಗಾಗಲೇ ಪ್ರತೀ ಕೆಜಿಗೆ 2 ಲಕ್ಷ ರೂ. ಗಡಿ ದಾಟಿದ್ದು, ಪ್ರಸ್ತುತ 2,23,000 ರೂ.ಗೆ ತಲುಪಿದ್ದು, ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.

ಚಿನ್ನದ ಆಭರಣಗಳು ದುಬಾರಿಯಾದ ಹಿನ್ನಲೆಯಲ್ಲಿ ಆಭರಣ ಪ್ರಿಯರು ಚಿನ್ನಲೇಪಿತ ಬೆಳ್ಳಿಯ ಆಭರಣಗಳಿಗೆ ಮೊರೆ ಹೋಗುತ್ತಿರುವುದು ಬೆಳ್ಳಿಯ ಧಾರಣೆ ಹೆಚ್ಚಾಗಲು ಒಂದು ಕಾರಣವಾದರೆ ಎಲೆಕ್ಟ್ರಿಕಲ್‌ ವಾಹನಗಳ ಉತ್ಪಾದನೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಮತ್ತೊಂದು ಕಾರಣವಾಗಿದೆ. ಎಲೆಕ್ಟ್ರಿಕಲ್‌ ವಾಹನಗಳ ತಯಾರಿಕೆ ಸಂದರ್ಭದಲ್ಲಿ ಬೆಳ್ಳಿಯನ್ನು ಬಳಸಲಾಗುತ್ತಿದೆ. ಹೀಗಾಗಿ ಬೆಳ್ಳಿಗೂ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ವರ್ತಕರ ಅಂದಾಜಿನ ಪ್ರಕಾರ, ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಯುವ ಸೂಚನೆಗಳಿಲ್ಲ. ಏರುಗತಿಯಲ್ಲೇ ಬೆಲೆಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿವೆ.

RELATED ARTICLES

Latest News