ಬೆಂಗಳೂರು,ಜ.24- ವಿಧಾನಮಂಡಲದ ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ ಹಂಗಾಮ ಸೃಷ್ಟಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಇದೀಗ ಗಣರಾಜ್ಯೋತ್ಸವ ಭಾಷಣಕ್ಕೂ ಕ್ಯಾತೆ ತೆಗೆಯುವ ಮೂಲಕ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ಪುನಃ ಕೇಂದ್ರ ಸರ್ಕಾರದಿಂದ ಉಂಟಾಗಿರುವ ಅನ್ಯಾಯಗಳನ್ನು ಸೇರ್ಪಡೆ ಮಾಡಿದೆ ಎಂದು ತಿಳಿದುಬಂದಿದೆ.
ಭಾಾಷಣದಲ್ಲಿ ಸರ್ಕಾರದ ಇದುವರೆಗಿನ ಸಾಧನೆಗಳು, ಮುಂದಿನ ಯೋಜನೆಗಳು ಮತ್ತು ಗುರಿಗಳನ್ನು ಹೊಂದಿರುವ ಅಂಶಗಳಿರುತ್ತದೆ. ಇದನ್ನು ರಾಜ್ಯಪಾಲರ ಮೂಲಕ, ಆಯಾಯ ಸರ್ಕಾರ ಸಾರ್ವಜನಿಕರ ಮುಂದೆ ಇಡುತ್ತದೆ. ಹಾಗಾಗಿ, ಈ ಭಾಷಣವನ್ನು ಸರ್ಕಾರವೇ ಸಿದ್ದ ಪಡಿಸಿಕೊಡುತ್ತದೆ.
ಸಾಮಾನ್ಯವಾಗಿ ಪ್ರತಿವರ್ಷ ಜನವರಿ 26ರ ಗಣರಾಜ್ಯೋತ್ಸವದಂದು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಸರ್ಕಾರ ಬರೆದು ಕೊಟ್ಟಿರುವ ಭಾಷಣವನ್ನು ಓದುವುದು ಈವರೆೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು.
ಆದರೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗದ ನಡುವೆ ನೇರಾನೇರಿ ಸಂಘರ್ಷ ಏರ್ಪಟ್ಟಿದೆ.ಒಂದು ಕಡೆ ಜಂಟಿ ಅಧಿವೇಶನ ವೇಳೆ ಸರ್ಕಾರದ ಭಾಷಣವನ್ನು ಓದದೆ ಕೇವಲ ಎರಡು ಸಾಲಿನಲ್ಲಿ ಓದಿ ಹೊರ ನಡೆದ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕೆಂದು ಆಡಳಿತರೂಢ ಕಾಂಗ್ರೆಸ್ ಪಟ್ಟು ಹಿಡಿದಿದೆ.
ಕಾಯಾರ್‌ಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರನ್ನು ಸದನಕ್ಕೆ ಕರೆಸಿ ಸರ್ಕಾರ ದುರುದ್ದೇಶ ಪೂರ್ವಕವಾಗಿಯೇ ಅವಮಾನ ಮಾಡಿದೆ. ಅದರಲ್ಲೂ ಅವರು ಸದನದಿಂದ ನಿರ್ಗಮಿಸುವ ವೇಳೆ ಅಡ್ಡಗಟ್ಟಿದ್ದ ಕೆಲವು ಸದಸ್ಯರನ್ನು ಸದನದಿಂದ ಅಮಾನತು ಪಡಿಸಬೇಕೆಂದು ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹಾಗಿದೆ.
ರಾಜ್ಯಪಾಲರ ಭಾಷಣದಲ್ಲಿ ಮತ್ತೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ನರೇಗಾ ಯೋಜನೆ ಕುರಿತು ಉಲ್ಲೇಖ ಮಾಡಿಲ್ಲ. ಬದಲಿಗೆ ಕೇಂದ್ರದಿಂದ ರಾಜ್ಯಕ್ಕೆ ಉಂಟಾಗಿರುವ ತಾರತಮ್ಯ, ಮಲತಾಯಿ ಧೋರಣೆ ಸೇರಿದಂತೆ ಕೆಲವು ಪ್ರಮುಖ ಅಂಶಗಳನ್ನು ಭಾಷಣದಲ್ಲಿ ಉಲ್ಲೇಖ ಮಾಡಲಾಗಿದೆ. 2014ರಿಂದ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕಕ್ಕೆ ತೆರಿಗೆ ಪಾಲು, ಅನುದಾನ ಹಂಚಿಕೆ, ಯೋಜನೆಗಳ ಸ್ಥಗಿತ, ನೀರಾವರಿ, ರೈಲ್ವೆ ,ಎನ್ ಡಿ ಆರ್ ಎಫ್ ಅಡಿ ರಾಜ್ಯಕ್ಕೆ ಬರಬೇಕಾದ ಬಾಕಿ ಹಣ, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ನೀಡಬೇಕಾದ ತೆರಿಗೆ ಪಾಲು ಇತ್ಯಾದಿ ಅಂಶಗಳನ್ನು ರಾಜ್ಯಪಾಲರಾದ ಭಾಷಣದಲ್ಲಿ ಸೇರ್ಪಡೆ ಮಾಡಲಾಗಿದೆ.
ಸಾಮಾನ್ಯವಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರಿಗೆ ಕನಿಷ್ಠಪಕ್ಷ 4-ರಿಂದ 5 ಐದು ದಿನಗಳ ಮುಂಚಿತವಾಗಿ ಕಳುಹಿಸಿಕೊಡಲಾಗುತ್ತದೆ. ಇದರಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿದ್ದರೆ ತೆಗೆದುಹಾಕುವಂತೆ ಇಲ್ಲವೇ ಸರಿಪಡಿಸುವಂತೆ ರಾಜಭವನ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತಾರೆ.
ಮುಖ್ಯ ಕಾರ್ಯದರ್ಶಿಗಳು ಇದನ್ನು ಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದು ಒಂದು ರೀತಿಯ ಅಲಿಖಿತ ನಿಯಮವಾಗಿದೆ. ಜಂಟಿ ಅಧಿವೇಶನದಲ್ಲಿ ಸಂಪೂರ್ಣ ಭಾಷಣವನ್ನು ಓದದೆ, ಸರ್ಕಾರಕ್ಕೆ ಮುಜುಗರ ಸೃಷ್ಟಿಸಿರುವ ರಾಜ್ಯಪಾಲರ ವಿರುದ್ಧ ನೇರಾನೇರ ಸಡ್ಡು ಹೊಡೆದಿರುವ ಸರ್ಕಾರ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳನ್ನು ಉಲ್ಲೇಖ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯಪಾಲನು ಕೇಂದ್ರವನ್ನು ಟೀಕಿಸುವ ಯಾವುದೇ ಅಂಶಗಳಿದ್ದರೂ ನಾನು ಓದುವುದಿಲ್ಲ. ಇದನ್ನು ಸರಿಪಡಿಸದಿದ್ದರೆ ನಾವೇ ಸಿದ್ಧಪಡಿಸಿದ
ಭಾಷಣವನ್ನು ಓದುತ್ತೇನೆಂದು ಅಧಿಕಾರಿಗಳ ಮೂಲಕ ಸಂಬಂಧ ಪಟ್ಟವರಿಗೆ ಈಗಾಗಲೇ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಆದರೆ, ವಿಧಾನಮಂಡಲದಲ್ಲಿ ಕೆಲವು ದಿನಗಳ ಹಿಂದೆ ನಡೆದ ವಿದ್ಯಮಾನದ ನಂತರ, ಸಿದ್ದರಾಮಯ್ಯ ಸರ್ಕಾರ ಯಾವರೀತಿ ಭಾಷಣ ಬರೆದುಕೊಡಲಿದೆ, ಅದರಲ್ಲಿ ಏನೇನು ಅಂಶಗಳಿರುತ್ತದೆ, ಅದಕ್ಕೆ ಲೋಕಭವನದ ಪ್ರತಿಕ್ರಿಯೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರ ಬರೆದುಕೊಟ್ಟಿದ್ದ ಅಂಶಗಳನ್ನು ಪೂರ್ತಿ ಓದದೇ, ಒಂದು ನಿಮಿಷದಲ್ಲಿ ನಾಲ್ಕು ಸಾಲನ್ನು ಓದಿ, ರಾಜ್ಯಪಾಲರು ಸದನದಿಂದ ನಿರ್ಗಮಿಸಿದ್ದರು. ಈ ವಿದ್ಯಮಾನ, ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗದಂತೆ ರಾಜಕೀಯ ಚತುರ ನಡೆಯನ್ನು ಇಡಲಾಗಿತ್ತು. ಈ ವಿದ್ಯಮಾನ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿತ್ತು. ಬಿಜೆಪಿಯ ಮುಖಂಡರು ನನ್ನ ಬಟ್ಟೆಯನ್ನು ಹರಿದುಹಾಕಿದರು ಎಂದು ಕಾಂಗ್ರೆಸ್ ಶಾಸಕ ಬಿಕೆ ಹರಿಪ್ರಸಾದ್ ದೂರಿದ್ದರು.
ಇದಕ್ಕೆಲ್ಲಾ ಕಾರಣವಾಗಿದ್ದದ್ದು, ಸಿದ್ದರಾಮಯ್ಯನವರ ಸರ್ಕಾರ, ರಾಜ್ಯಪಾಲರಿಗೆ ಬರೆದು ಕೊಟ್ಟಿದ್ದ ಭಾಷಣದ ಅಂಶಗಳು. ಕೇಂದ್ರ ಸರ್ಕಾರದ ವಿರುದ್ದದ ಅಂಶಗಳು ಭಾಷಣದಲ್ಲಿ ಇದ್ದಿದ್ದಕ್ಕೆ ರಾಜ್ಯಪಾಲರು ಭಾಷಣ ಓದಲು ನಿರಾಕರಿಸಿದ್ದರು ಎಂದು ಸುದ್ದಿಯಾಗಿತ್ತು.
ಕರ್ನಾಟಕದ ವಿಧಾನಮಂಡಲದ ಅಧಿವೇಶನದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರ ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯಪಾಲರಿಂದ ಭಾಷಣ ಮಾಡಿಸುವ ಪದ್ದತಿಯನ್ನೇ ನಿಲ್ಲಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಭಿಪ್ರಾಯಪಟ್ಟಿದ್ದರು.
