ಬೆಳಗಾವಿ, ಡಿ.16- ಗ್ರೆಟರ್ ಬೆಂಗಳೂರು ಪ್ರಾಧಿಕಾರಕ್ಕೆ ವಿಧಾನ ಪರಿಷತ್ ಮತ್ತು ರಾಜ್ಯಸಭೆಯ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಿಸುವ ವಿಧೇಯಕಕ್ಕೆ ವಿಧಾನಸಭೆಯಲ್ಲಿಂದು ಅಂಗೀಕಾರ ದೊರೆತಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ಎರಡನೇ ತಿದ್ದುಪಡಿ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ, ವಿವರಣೆ ನೀಡಿದರು.
ರಾಜ್ಯಸಭೆ ಸದಸ್ಯರಾದ ಸುಧಾಮೂರ್ತಿ ಹಾಗೂ ಇತರ ಪ್ರದೇಶಗಳ ಜನಪ್ರತಿನಿಧಿಗಳ ಹೆಸರನ್ನು ಗ್ರೆಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನೇಮಿಸಲು ಮತ್ತು ಸ್ಥಳೀಯ ಸಂಸ್ಥೆಗಳು, ಪದವೀಧರ ಕ್ಷೇತ್ರಗಳು ಹಾಗೂ ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರನ್ನು ಜಿಬಿಎಗೆ ಸದಸ್ಯರನ್ನಾಗಿ ನೇಮಿಸಲು ವಿಧೇಯಕದಲ್ಲಿ ಅವಕಾಶ ಇದೆ ಎಂದರು.
ಮುಖ್ಯ ಕಾರ್ಯದರ್ಶಿಯವರನ್ನು, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಎಕ್ಸ್ ಅಫಿಷಿಯೋ ಸದಸ್ಯರನ್ನಾಗಿ ನೇಮಿಸಲು ಅವಕಾಶಗಳಿವೆ.
ಉಳಿದಂತೆ ಪಾಲಿಕೆಗಳನ್ನು ಪ್ರತಿನಿಧಿಸುವರು ಹಾಗೂ ಜನಪ್ರತಿನಿಧಿಗಳು ಜಿಬಿಎ ಸದಸ್ಯರಾಗಿರುತ್ತಾರೆ ಎಂದರು.ಹೊಸ ತಿದ್ದುಪಡಿಯ ಪ್ರಕಾರ ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ರಮೇಶ್ ಬಾಬು ಮತ್ತಿತರರು ಸದಸ್ಯರಾಗಿ ಸೇರ್ಪಡೆಯಾಗಲಿದ್ದಾರೆ ಎಂದರು.
ಬಿಜೆಪಿಯ ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ತಿನ ಸದಸ್ಯರು ನೋಡಲ್ ಕ್ಷೇತ್ರವನ್ನಾಗಿ ಒಂದು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರನ್ನು ಇಲ್ಲಿಗೆ ಸೇರ್ಪಡೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು 20 ಜನರಿಗೆ ಒಬ್ಬ ಪ್ರತಿನಿಧಿಯನ್ನಾಗಿ ಜಿಬಿಗೆ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ 360 ಮಂದಿ ಸದಸ್ಯರು ನಿಯೋಜನೆಗೊಳ್ಳುತ್ತಾರೆ. ಇದರ ಬಗ್ಗೆ ಗೊಂದಲಗಳಿವೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಉತ್ತರ ನೀಡಿ, 20 ಸಾವಿರ ಜನರಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವ ಬಗ್ಗೆ ನನಗೂ ಗೊಂದಲಗಳಿವೆ. ಹಾಗೆಯೇ ಹೊಸ ಪ್ರದೇಶಗಳನ್ನು ಜಿಬಿಗೆ ಸೇರ್ಪಡೆ ಮಾಡಿಕೊಂಡರೆ ಆರು ತಿಂಗಳಲ್ಲಿ ಪಾಲಿಕೆ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲು ಚುನಾವಣೆ ನಡೆಸಲಾಗುವುದು. ಹೊರಭಾಗದ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಂಡ ಪರಿವರ್ತನಾ ಸಮಯದಲ್ಲಿ ಮತದಾನದ ಅವಕಾಶವನ್ನು ನಿರಾಕರಿಸಲಾಗುವುದು ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಮತ್ತು ರಾಜ್ಯಸಭೆಯ ಸದಸ್ಯರು ಎಲ್ಲೆಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಯುತ್ತವೆಯೋ ಅಲ್ಲಿಗೆ ತಮ ವಿಳಾಸವನ್ನು ಬದಲಾವಣೆ ಮಾಡಿಕೊಂಡು ಅಲ್ಲೆಲ್ಲಾ ಮತ ಹಾಕುತ್ತಾರೆ. ಈ ಕ್ರಮಗಳಿಂದ ಆಡಳಿತ ಪಕ್ಷಕ್ಕೆ ಅನುಕೂಲವಾಗುತ್ತದೆ.
ಇದಕ್ಕೆ ಕಡಿವಾಣ ಹಾಕಬೇಕು. ವಿಧಾನ ಪರಿಷತ್ ಮತ್ತು ರಾಜ್ಯಸಭೆಯ ಸದಸ್ಯರಿಗೆ 5 ವರ್ಷವೂ ಒಂದೇ ಕಡೆ ಮತ ಹಾಕಲು ನಿರ್ಬಂಧ ವಿಧಿಸಬೇಕು ಎಂದರು.ಈ ಸಲಹೆಗೆ ನನ್ನ ಸಹಮತವಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಇದನ್ನು ವಿರೋಧಿಸಿದ ಆಡಳಿತ ಪಕ್ಷದ ಸದಸ್ಯ ಬಸವರಾಜ ರಾಯರೆಡ್ಡಿ, ಜನಪ್ರತಿನಿಧಿಯ ಕಾಯ್ದೆಯ ಪ್ರಕಾರ ನಿರ್ಬಂಧ ವಿಧಿಸಲು ಅವಕಾಶ ಇಲ್ಲ. ಸಲಹೆ ಕಾಯ್ದೆ ವಿರುದ್ಧವಾಗಿದೆ ಎಂದರು.
ಖಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಹಾಗಿದ್ದರೆ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಸದಸ್ಯರ ಮತದಾನವನ್ನು ಟೂರಿಂಗ್ ಟಾಕೀಸ್ ರೀತಿ ಬಳಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಚರ್ಚೆಗಳ ಬಳಿಕ ವಿಧೇಯಕಕ್ಕೆ ತಿದ್ದುಪಡಿಗಳ ಜೊತೆ ಧ್ವನಿ ಮತದ ಮೂಲಕ ಅಂಗೀಕಾರ ದೊರೆತಿದೆ ಎಂದು ಸಭಾಧ್ಯಕ್ಷರು ಘೋಷಿಸಿದರು.
