ಬೆಳಗಾವಿ, ಡಿ.21- ರಾಜ್ಯದ ಗೃಹಲಕ್ಷಿ ಯೋಜನೆಯಡಿ 24ನೇ ಕಂತಿನ ಹಣವನ್ನು ಸೋಮವಾರದಿಂದ ಶನಿವಾರದೊಳಗೆ ಬಿಡುಗಡೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷಿ ಹೆಬ್ಬಳ್ಕರ್ ತಿಳಿಸಿದರು. ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಇಲಾಖೆಯ ಅನುಮತಿಯನ್ನು ಈಗಾಗಲೇ ಪಡೆಯಲಾಗಿದೆ. ಹೀಗಾಗಿ ಸೋಮವಾರದಿಂದ ಹಣ ಬಿಡುಗಡೆಯ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಹೇಳಿದರು.
ಮೃತಪಟ್ಟವರ ಖಾತೆಗಳಿಗೂ ಗೃಹಲಕ್ಷಿಯ ಹಣ ರವಾನೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಸಿದ ಅವರು, ಒಂದು ಕಂತು ಆ ರೀತಿ ಪಾವತಿ ಯಾಗಿರುವ ಮಾಹಿತಿ ಇದೆ. ಅದನ್ನು ತಡೆಯಲು ಈಗಾಗಲೇ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಎರಡು ಸಭೆಗಳನ್ನು ನಡೆಸಲಾಗಿದೆ. ವಿಶೇಷವಾದ ಸಾಫ್ಟ್ ವೇರ್ ಬಳಸಿ ಇನ್ನು ಮುಂದೆ ಮೃತಪಟ್ಟವರ ಖಾತೆಗಳಿಗೆ ಹಣ ಸಂದಾಯವಾಗದಂತೆ ತಡೆಯಲಾಗುವುದು ಎಂದರು.
ಸಾಫ್್ಟವೇರ್ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಮೃತಪಟ್ಟವರನ್ನು ಗುರುತಿಸಿದರೆ ಹಣ ಸಂದಾಯ ಮಾಡುವುದನ್ನು ತಡೆಯಲಾಗುವುದು. ಈಗಾಗಲೇ ಒಂದು ತಿಂಗಳ ಹಣ ಸಂದಾಯವಾಗಿರುವುದನ್ನು ವಾಪಸ್ ಪಡೆಯಲು ಬ್ಯಾಂಕುಗಳಿಗೆ ಹೊಣೆಗಾರಿಕೆ ವಹಿಸಲಾಗಿದೆ. ಮುಖ್ಯ ಕಾರ್ಯದರ್ಶಿಯವರು ಈ ಸಂಬಂಧ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಅಧಿಕಾರ ಹಂಚಿಕೆಯ ಕುರಿತಂತೆ ಹಾಗೂ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉತ್ತಮವಾದ ಚರ್ಚೆಗಳಾಗಿವೆ. ಅಭಿವೃದ್ಧಿಯ ಪರವಾದ ಬಹಳಷ್ಟು ಯೋಜನೆಗಳಿಗೆ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಳಗಾವಿಯಲ್ಲಿನ ಅಭಿವೃದ್ಧಿಗೂ ತೀರ್ಮಾನಗಳಾಗಿವೆ. ಆದರೆ ರಾಜಕೀಯಕ್ಕಾಗಿ ಚರ್ಚೆಯ ದಿಕ್ಕನ್ನೇ ಬದಲಾಯಿಸಲಾಯಿತು ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ರಾಜಕೀಯದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಯೋಜನೆಗಳು ಘೋಷಣೆಯಾಗಿಲ್ಲ. ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನಸಿತ್ತು. ಬೆಳಗಾವಿ ತಾಲೂಕಿನಲ್ಲಿ ಹನ್ನೊಂದುವರೆೆ ಲಕ್ಷ ಜನಸಂಖ್ಯೆ ಇದೆ. ಜಿಲ್ಲೆಯಲ್ಲಿ 15 ತಾಲೂಕು ಮತ್ತು 18 ವಿಧಾನಸಭಾ ಕ್ಷೇತ್ರಗಳಿವೆ. ಹೊಸದಾಗಿ ಮೂರು ಹೆಚ್ಚುವರಿ ತಾಲೂಕುಗಳು ಸೇರ್ಪಡೆಯಾಗುತ್ತವೆ.
ಹೀಗಾಗಿ ಆಡಳಿತಾತಕವಾಗಿ ಜಿಲ್ಲೆಯನ್ನು ಎರಡು ಅಥವಾ ಮೂರು ಭಾಗಗಳನ್ನಾಗಿ ವಿಭಜಿಸಲು ಆಸಕ್ತಿ ಇತ್ತು. ಮುಖ್ಯಮಂತ್ರಿಯವರು ಆರಂಭದಲ್ಲೇ ಈ ಬಗ್ಗೆ ಚರ್ಚೆ ಮಾಡಿದ್ದರು. ಆದರೆ ಎಲ್ಲರೂ ನಿಯೋಗ ತೆಗೆದು ಕೊಂಡು ಬಂದಿದ್ದರಿಂದಾಗಿ ವಿಳಂಬವಾಯಿತು. ಹಳೆದು ತೂಗಿ ನಿರ್ಧಾರ ತೆಗೆದುಕೊಳ್ಳಲು ಸದ್ಯಕ್ಕೆ ಮುಖ್ಯಮಂತ್ರಿ ಅವರು ತಮ ನಿಲುವನ್ನು ಮುಂದೂಡಿದ್ದಾರೆ ಎಂದು ಹೇಳಿದರು.
ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯವಾಗಿ ಅಲ್ಲೇ ನಡೆಸಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಬುದ್ಧಿಮಾಂದ್ಯ ಶಾಲೆಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಈ ಘಟನೆಯಿಂದ ಸರ್ಕಾರಕ್ಕೂ ಮುಜುಗರವಾಗುತ್ತಿದ್ದು, ಅಧಿಕಾರಿಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ. ಪೊಲೀಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸಂಸ್ಥೆಯನ್ನು ಮುಚ್ಚಿಸಲಾಗುವುದು. ಅಲ್ಲಿರುವ ಮಕ್ಕಳನ್ನು ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಇತರ ಪಾಲನಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು. ಇದಕ್ಕೆ ಪೋಷಕರ ಅನುಮತಿ ಪಡೆಯಲಾಗುವುದು. ಹಲ್ಲೇ ನಡೆಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.
