ಬೆಂಗಳೂರು,ಡಿ.2- ರಾಜ್ಯಾದ್ಯಂತ ಇಂದು ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದ್ವಿತ್ವ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಮೈ ಕೊರೆಯುವ ಚಳಿ ಇದ್ದರೂ ಸಹ ಇಂದು ಮುಂಜಾನೆಯೇ ಭಕ್ತರು ಆಂಜನೇಯ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಆಂಜನೇಯ ಸ್ವಾಮಿಗೆ ಪ್ರಿಯವಾದ ತುಳಸಿ, ವೀಳ್ಯದೆಲೆ, ಬೆಣ್ಣೆ, ಉದ್ದಿನವಡೆ ಸೇರಿದಂತೆ ವಿಶೇಷ ಅಲಂಕಾರದಿಂದ ವಿವಿಧ ದೇವಾಲಯಗಳಲ್ಲಿ ಆಂಜನೇಯ ಸ್ವಾಮಿಯು ಕಂಗೊಳಿಸುತ್ತಿದ್ದು, ಮುಂಜಾನೆಯೇ ಅಭಿಷೇಕ, ಹೋಮ ಹವನ, ಭಜನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.
ಬೆಂಗಳೂರಿನ ಉತ್ತರಹಳ್ಳಿಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಇಷ್ಟ ದೇವತಾ ಪ್ರಾರ್ಥನೆ, ಗುರು ಪ್ರಾರ್ಥನೆ, ಗಣಪತಿ ಹೋಮ, ಪುಣ್ಯಾಹ ಸೇರಿದಂತೆ ಅನೇಕ ಪೂಜೆಗಳನ್ನು ನೆರವೇರಿಸಲಾಯಿತು.
ಅದೇ ರೀತಿ ದಾಸನಪುರದ ಕಾರ್ಯಸಿದ್ಧ ಶ್ರೀ ಪ್ರಸನ್ನ ಬಯಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಮಂಗಳವಾದ್ಯ ಸಮೇತ ವಿಶೇಷ ಅಲಂಕಾರ ದರ್ಶನ ನಡೆದವು.
ಮೈಸೂರಿನ ಗಾಳಿ ಆಂಜನೇಯ ದೇವಾಲಯ, ವಿಜಯನಗರದ ಮಾರುತಿಮಂದಿರ, ನಾಗರಬಾವಿಯ ಆಂಜನೇಯ, ಯಶವಂತಪುರದ ಗಾಲಿ ಆಂಜನೇಯ, ಜಕ್ಕೂರು ಲೇಔಟ್ನ ವೀರಾಂಜನೇಯ ಸ್ವಾಮಿ ಹಾಗೂ ಉಲ್ಲಾಳುವಿನ ಸೊನ್ನೇನಹಳ್ಳಿ ಆಂಜನೇಯ ಸ್ವಾಮಿ ಸೇರಿದಂತೆ ನಗರದ ಆಂಜನೇಯ ದೇವಾಲಯಗಳಲ್ಲಿ ಪೂಜೆಗಳು ನೆರವೇರಿದವು.
ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿರುವ ಪ್ರಮುಖ ಆಂಜನೇಯ ದೇವಾಲಯಗಳಲ್ಲಿ ಪೂಜೆಗಳು ನಡೆದವು. ತುಮಕೂರಿನ ಜಿಲ್ಲಾಧಿಕಾರಿ ಸಮೀಪವಿರುವ ಬೃಹತ್ ಆಂಜನೇಯ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಇಂದು ಹನುಮನಾಮ ಭಜನೆ ಮೊಳಗಿದವು.
