Thursday, January 1, 2026
Homeರಾಜ್ಯಕಳೆದ ವರ್ಷದ ಕಹಿ ಘಟನೆಗಳು ಮರುಕಳಿಸದಂತೆ ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್‌ ಸೂಚನೆ

ಕಳೆದ ವರ್ಷದ ಕಹಿ ಘಟನೆಗಳು ಮರುಕಳಿಸದಂತೆ ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್‌ ಸೂಚನೆ

Home Minister Parameshwara instructs police not to repeat last year's bitter incidents

ಬೆಂಗಳೂರು, ಜ.1- ಕಳೆದ ವರ್ಷದ ಕಹಿ ಘಟನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ವರ್ಷ ಅಂತಹ ಘಟನೆಗಳು ಮರುಕಳಿಸಬಾರದು ಎಂದು ಪೊಲೀಸ್‌‍ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ತಾವು ಹಿರಿಯ ಪೊಲೀಸ್‌‍ ಅಧಿಕಾರಿಗಳ ಜೊತೆ ಕಳೆದ ವರ್ಷ ನಡೆದಿರುವ ಕಹಿ ಘಟನೆಗಳ ಬಗ್ಗೆ ಚರ್ಚೆ ನಡೆಸಿದ್ದು, ಮುಂದಿನ ವರ್ಷ ಅಂತಹ ಯಾವ ಘಟನೆಗಳೂ ನಡೆಯದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ಷ್ಮವಾಗಿ ವಿವರಣೆ ನೀಡಿದ್ದೇನೆ ಎಂದು ಹೇಳಿದರು.

ಧರ್ಮಸ್ಥಳ ಸೇರಿದಂತೆ ಕೆಲವು ಪ್ರಕರಣಗಳನ್ನು ಎಸ್‌‍ಐಟಿ ಹಾಗೂ ಸಿಒಡಿ ತನಿಖೆಗೆ ವಹಿಸಲಾಗಿದೆ. ಅವುಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುತ್ತೇವೆ.ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ನೂರಾರು ವರ್ಷಗಳ ಹಿಂದೆ ಬಸವಣ್ಣ ಅವರೇ ಅಂತರ್ಜಾತಿಯ ವಿವಾಹಗಳನ್ನು ಮಾಡಿಸಿದ್ದರು. ಈಗಲೂ ಆ ರೀತಿಯ ಮದುವೆಗಳು ನಡೆಯುತ್ತಲೇ ಇವೆ. ಅದರಲ್ಲಿ ಮರ್ಯಾದಾ ಹತ್ಯೆಯಾಗುವುದು ಸಮಾಜಕ್ಕೆ ಸರಿಯಾದ ಸಂದೇಶ ಹೋಗುವುದಿಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ ಎಂದರು.

ಇದೇ ವೇಳೆ ರಾಜ್ಯದ ಎಲ್ಲಾ ಜನರಿಗೂ ಹೊಸ ವರ್ಷದ ಶುಭಾಶಯ ಹಾರೈಸಿದ ಸಚಿವ ಪರಮೇಶ್ವರ್‌, ಎಲ್ಲರಿಗೂ ಅವರ ಕನಸುಗಳು ಈಡೇರಲಿ. ಯುವಜನರ ಭವಿಷ್ಯ ಉಜ್ವಲವಾಗಲಿ. ಶಾಂತಿ ನೆಮದಿಯಿಂದ ಎಲ್ಲರೂ ಬದುಕುವಂತಾಗಲಿ ಎಂದರು.

ಶಾಂತಿಯುತ ವರ್ಷಾಚರಣೆ:
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯಾದ್ಯಂತ ಹೊಸ ವರ್ಷಾ ಆಚರಣೆಯಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇತ್ತು, ಸುಮಾರು 8 ಲಕ್ಷ ಜನ ಭಾಗವಹಿಸಿರುವ ಅಂದಾಜಿದೆ. ತಾವು ರಾತ್ರಿ ಒಂದೂವರೆ ಗಂಟೆಯವರೆಗೂ ಬೆಂಗಳೂರು ನಗರ ಪೊಲೀಸ್‌‍ ಆಯುಕ್ತರ ಕಚೇರಿಯಲ್ಲಿನ ಕಮಾಂಡಿಂಗ್‌ ಸೆಂಟರ್‌ ನಲ್ಲಿ ಕುಳಿತು ಮೇಲುಸ್ತುವಾರಿ ನೋಡಿದ್ದಾಗಿ ಹೇಳಿದರು.

ಶಾಂತಿಯುತವಾದ ಹೊಸ ವರ್ಷಾಚರಣೆಯಾಗಿದೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸುಮಾರು 20 ಸಾವಿರ ಪೊಲೀಷರ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಎಲ್ಲಿಯೂ ಅಹಿತಕರ ಘಟನೆ ಜೀವ ಹಾನಿಯಾಗಿರುವ ಮಾಹಿತಿ ಇಲ್ಲ. ಸಂಚಾರ ದಟ್ಟಣೆಯು ಕಂಡುಬಂದಿಲ್ಲ. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲೂ ಶಾಂತಿಯುತ ಆಚರಣೆಯಾಗಿದೆ ಎಂದು ಹೇಳಿದರು.

ಗೃಹ ಇಲಾಖೆಯಲ್ಲಿ ಮೊದಲ ಬಾರಿಗೆ ಮೂವತ್ತಕ್ಕೂ ಹೆಚ್ಚು ಪೊಲೀಸ್‌‍ ಅಧಿಕಾರಿಗಳಿಗೆ ಪದೋನ್ನತ್ತಿ ನೀಡಲಾಗಿದೆ. ಇದು ಇತಿಹಾಸದಲ್ಲೇ ಮೊದಲು. ಎಲ್ಲರೂ ಉತ್ತಮ ತರಬೇತಿ ಪಡೆದ ಪೊಲೀಸ್‌‍ ಅಧಿಕಾರಿಗಳಾಗಿದ್ದು, ಅವರಿಂದ ರಾಜ್ಯದ ಜನರಿಗೆ ಉತ್ತಮ ಸೇವೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪೊಲೀಸ್‌‍ ಇಲಾಖೆಯ ಆಧುನಿಕರಣಕ್ಕೆ ಕೇಂದ್ರ ಸರ್ಕಾರದಿಂದ 150 ಕೋಟಿ ರೂಪಾಯಿಗಳ ಅನುದಾನ ದೊರೆತಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ ಪೊಲೀಸ್‌‍ ಅಧಿಕಾರಿಗಳು ಸುಮಾರು ಹತ್ತಕ್ಕೂ ಹೆಚ್ಚು ಬಾರಿ ದೆಹಲಿಕೆ ಭೇಟಿ ನೀಡಿ, ಅನುದಾನ ಪಡೆಯಲು ಪ್ರಯತ್ನ ಮಾಡಿದ್ದರು. ಅವರ ಪ್ರಯತ್ನ ಯಶಸ್ವಿಯಾಗಿದೆ ಎಂದರು.

ಜೈಲುಗಳಲ್ಲಿ ಖೈದಿಗಳ ಸ್ವೇಚ್ಚಾಚಾರ ಸೇರಿದಂತೆ ಇತರ ಆರೋಪಗಳ ಬಗ್ಗೆ ಬಂಧಿಖಾನೆಯ ಹೊಸ ಡಿಜಿಪಿ ಅಲೋಕ್‌ ಕುಮಾರ್‌ ಗಮನಿಸುತ್ತಾರೆ. ಬೆಳಗಾವಿ, ಕಲಬುರಗಿ ಸೇರಿದಂತೆ ವಿವಿಧ ಜೈಲುಗಳಿಗೆ ಖುದ್ದು ಭೇಟಿ ನೀಡುತ್ತಿದ್ದಾರೆ. ಆರೋಪಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಬೆಳಗಾವಿ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ನಮ ಗಮನದಲ್ಲಿದೆ. ಕಳ್ಳತನದ ಗುಂಪುಗಳು ಹೊರಗಿನಿಂದ ರಾಜ್ಯಕ್ಕೆ ಬಂದು ಕೃತ್ಯ ಎಸಗಿ, ವಾಪಸ್‌‍ ಹೋಗುವುದು ಮೊದಲಿನಿಂದಲೂ ನಡೆದಿದೆ. ಅದರ ಬಗ್ಗೆಯೂ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದರು.

ಸಂಭ್ರಮಾಚರಣೆ :
ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾದ ಹೊಸ ವರ್ಷಾಚರಣೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್‌ ಇಂದು ತಮ ಗೃಹ ಕಚೇರಿಯಲ್ಲಿ ಹಿರಿಯ ಪೊಲೀಸ್‌‍ ಅಧಿಕಾರಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು.ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಿನ್ನೆ ಇಡೀ ರಾತ್ರಿ ಪೊಲೀಸ್‌‍ ಅಧಿಕಾರಿಗಳು ಬಂದೋಬಸ್ತ್‌ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅಧಿಕಾರಿಗಳಿಗೆ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಲಾಗಿರಲಿಲ್ಲ.

ಇಂದು ಶುಭ ಹಾರೈಸಲು ಆಗಮಿಸಿದ ಅಧಿಕಾರಿಗಳ ಜೊತೆಗೆ ಸಚಿವರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಡಿಜಿಪಿ ಸಲೀಂ ಅಹಮದ್‌, ನಗರ ಪೊಲೀಸ್‌‍ ಆಯುಕ್ತರಾದ ಸೀಮಂತ್‌ಕುಮಾರ್‌ ಸಿಂಗ್‌, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಡಿಜಿಪಿಗಳಾದ ಅಲೋಕ್‌ ಕುಮಾರ್‌, ಹೇಮಂತ್‌ ನಿಂಬಾಳ್ಕರ್‌, ಹಿತೇಂದ್ರ ಮತ್ತಿತರು ಸಂಭ್ರಮದಲ್ಲಿ ಭಾಗವಹಿಸಿದ್ದರು.ಇದೆ ವೇಳೆ ವಾರ್ತಾಪತ್ರಿಕೆ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಬಳಿಕ ಸಚಿವರು ಎಲ್ಲಾ ಹಿರಿಯ ಅಧಿಕಾರಿಗಳ ಜೊತೆ ಉಪಹಾರ ಸೇವಿಸಿದರು.

RELATED ARTICLES

Latest News