ಬೆಂಗಳೂರು,ಡಿ.30- ನಿರಂತರ ಏರುಗತಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಕಳೆದ ಎರಡು ದಿನಗಳಿಂದ ಇಳಿಕೆಯಾಗುತ್ತಿವೆ. ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಆದರೂ ಪ್ರಸ್ತುತ ಮಾರುಕಟ್ಟೆ ದರವು ಗ್ರಾಹಕರ ಕೈಗೆ ಎಟುಕದಷ್ಟು ದುಬಾರಿಯಾಗಿದೆ.
ಡಿ.22 ರಿಂದ ನಿರಂತರವಾಗಿ ಡಿ.27 ರವರೆಗೆ ಚಿನ್ನ ಮತ್ತು ಬೆಳ್ಳಿಯ ದರಗಳು ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿ ಹೊಸ ದಾಖಲೆ ನಿರ್ಮಿಸಿದ್ದವು.ಡಿ.28 ರಂದು ಸ್ಥಿರವಾಗಿದ್ದ ದರವು ನಿನ್ನೆ ಮತ್ತು ಇಂದು ಭಾರಿ ಇಳಿಕೆಯಾಗಿದೆ. 24 ಕ್ಯಾರೆಟ್ನ ಚಿನ್ನದ ದರವು ಪ್ರತೀ ಗ್ರಾಂಗೆ ನಿನ್ನೆ 317 ರೂ. ಹಾಗೂ ಇಂದು 305 ರೂ. ನಷ್ಟು ಇಳಿಕೆಯಾಗಿದೆ. ಪ್ರತೀ ಗ್ರಾಂಗೆ 13,620 ರೂ. ಮಾರುಕಟ್ಟೆ ದರವಿದೆ.
22 ಕ್ಯಾರೆಟ್ನ ಆಭರಣ ಚಿನ್ನವು ಪ್ರತಿ ಗ್ರಾಂಗೆ ನಿನ್ನೆ 290 ರೂ. ಹಾಗೂ ಇಂದು 280 ರೂ.ನಷ್ಟು ಇಳಿಕೆಯಾಗಿದೆ. ಪ್ರಸ್ತುತ ಪ್ರತಿ ಗ್ರಾಂಗೆ 12,485 ರೂ. ದರವಿದೆ. 3 ದಿನದಲ್ಲಿ 600 ರೂ.ಗೂ ಹೆಚ್ಚು ದರ ಇಳಿಕೆಯಾಗಿದೆ.ಡಿ.27 ರಂದು 24 ಕ್ಯಾರೆಟ್ನ ಚಿನ್ನವು 240 ರೂ. ಹೆಚ್ಚಳವಾಗಿ 14,242 ರೂ.ಗೆ ತಲುಪಿದ್ದು ಗರಿಷ್ಠ ದಾಖಲೆಯಾಗಿತ್ತು.
22 ಕ್ಯಾರೆಟ್ ಚಿನ್ನವು ಅಂದು 220 ರೂ.ನಷ್ಟು ಹೆಚ್ಚಳವಾಗಿ 13,055 ರೂ.ನಷ್ಟಿತ್ತು. 3 ದಿನದಲ್ಲಿ ಸುಮಾರು 500 ರೂ.ಗೂ ಹೆಚ್ಚು ದರದಲ್ಲಿ ಇಳಿಕೆಯಾಗಿದೆ.
ಬೆಳ್ಳಿ ದರದಲ್ಲಿ ಭಾರೀ ಕುಸಿತ :
ಚಿನ್ನದಂತೆ ಏರುಗತಿಯಲ್ಲಿದ್ದ ಬೆಳ್ಳಿಯೂ ಕಳೆದ 2 ದಿನಗಳಿಂದ ಇಳಿಮುಖವಾಗಿದೆ. ಇಂದು ಪ್ರತಿ ಕೆ ಜಿಗೆ 18 ಸಾವಿರ ರೂ.ಗಳಷ್ಟು ಭಾರೀ ಇಳಿಕೆಯಾಗಿದೆ. ನಿನ್ನೆ 4 ಸಾವಿರ ರೂ. ಇಳಿಕೆಯಾಗಿತ್ತು. ಪ್ರಸ್ತುತ ಪ್ರತೀ ಗ್ರಾಂಗೆ 240 ರೂ. ಹಾಗೂ ಕೆ.ಜಿ.ಗೆ 2,40,000 ರೂ. ಮಾರುಕಟ್ಟೆ ದರವಿದೆ.
ಡಿ.22 ರಿಂದ ನಿರಂತರ ಏರಿಕೆಯಾಗಿದ್ದ ಬೆಳ್ಳಿದರವು ಡಿ.27 ರಂದು ಪ್ರತೀ ಕೆ.ಜಿ.ಗೆ 22 ಸಾವಿರ ರೂ.ಗಳಷ್ಟು ಭಾರೀ ಏರಿಕೆಯಾಗಿ 2,62,000 ರೂ. ತಲುಪಿತ್ತು. ಇದು ಇದುವರೆಗಿನ ಬೆಳ್ಳಿಯ ಸಾರ್ವಕಾಲಿಕ ದಾಖಲೆಯಾಗಿತ್ತು.
ಚಿನ್ನ ಮತ್ತು ಬೆಳ್ಳಿ ದರಗಳು ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ಇನ್ನು ಮುಂದೆ ಏರಿಳಿತವಾಗಿ ಹೆಚ್ಚೂ ಕಡಿಮೆ ಇದೇ ದರವು ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
