ಬೆಂಗಳೂರು,ಡಿ.24- ಚಿನ್ನ ಮತ್ತು ಬೆಳ್ಳಿ ದರಗಳು ನಿರಂತರ ಏರಿಕೆಯಾಗಿದ್ದು ಗಗನಮುಖಿಯಾಗಿವೆ. ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದುಬಾರಿಯಾಗಿ ಗ್ರಾಹಕರ ಪಾಲಿಕೆಗೆ ಗಗನಕುಸುಮವಾಗಿವೆ. ಇದರಿಂದ ಆಭರಣ ಪ್ರಿಯರು ತತ್ತರಿಸುವಂತಾಗಿದೆ.
ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಕೂಡ ಏರಿಕೆಯಾಗಿವೆ. ಶುದ್ದ ಚಿನ್ನ(24 ಕ್ಯಾರೆಟ್) ಪ್ರತಿ ಗ್ರಾಂ.ಗೆ 38 ರೂ.ನಷ್ಟು ಏರಿಕೆಯಾಗಿದ್ದು, ಒಟ್ಟು 13,893 ರೂ. ತಲುಪಿದ್ದು ಇದು 14 ಸಾವಿರ ರೂ. ಗಡಿ ದಾಟುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಆಭರಣ ಚಿನ್ನ(24 ಕ್ಯಾರೆಟ್) ಪ್ರತಿ ಗ್ರಾಂ.ಗೆ 35 ರೂ.ನಷ್ಟು ಏರಿಕೆಯಾಗಿದ್ದು, 12,735 ರೂ.ಗೆ ತಲುಪಿದೆ. ಡಿಸೆಂಬರ್ 1ರಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿತ್ತು. ಡಿಸೆಂಬರ್ 20ರಿಂದ ಎರಡು ದಿನ ಸ್ಥಿರವಾಗಿದ್ದ ದರ 22ರಿಂದ ಇಂದಿವರೆಗೂ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ.
ಅದೇ ರೀತಿ ಬೆಳ್ಳಿ ದರವೂ ಏರುಗತಿಯಲ್ಲಿದ್ದು ಇಂದು ಪ್ರತಿ ಗ್ರಾಂ.ಗೆ 10 ರೂ. ಹೆಚ್ಚಳವಾಗಿದ್ದು, 1 ಕೆಜಿಗೆ 10 ಸಾವಿರ ರೂ. ಹೆಚ್ಚಾಗಿದೆ. ಪ್ರತಿ ಗ್ರಾಂ ಬೆಳ್ಳಿ ಗ್ರಾಂ 233 ರೂ. ಇದ್ದು 1 ಕೆಜಿ ದರವು 2,33,000 ರೂ.ಗೆ ತಲುಪಿದೆ.
ಚಿನ್ನದಂತೆಯೇ ಅತಿವೇಗವಾಗಿ ಬೆಳ್ಳಿ ದರ ಹೆಚ್ಚಾಗುತ್ತಿದೆ. ಈ ತಿಂಗಳ ಆರಂಭದಿಂದಲೂ ಏರಳಿತವಾಗುತ್ತಿದ್ದ ಬೆಳ್ಳಿ ದರ ಕಳೆದ 3 ದಿನಗಳಿಂದಲೂ ಸತತ ಏರಿಕೆ ಕಂಡಿದೆ. ಇದರಿಂದ ಆಭರಣ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟತೊಡಗಿದೆ.
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚಿನ್ನ-ಬೆಳ್ಳಿ ದರಗಳು ಏರಿಕೆಯಾಗುವುದು ಸಾಮಾನ್ಯ ಎಂಬುದು ವರ್ತಕರ ಅಭಿಪ್ರಾಯ. ಆದರೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹೂಡಿಕೆಗೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತಿವೆ.
ಹೀಗಾಗಿ ಚಿನ್ನ ಮತ್ತು ಬೆಳ್ಳಿಯ ಮೇಲೆ ನಿರೀಕ್ಷೆಗಿಂತ ಹೆಚ್ಚು ಹೂಡಿಕೆಗಳಾಗುತ್ತಿವೆ. ಅಲ್ಲದೆ ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ಗಳು ಚಿನ್ನ ಖರೀದಿಯ ಪ್ರಮಾಣವನ್ನು ಹೆಚ್ಚಿಸಿರುವುದು ಕೂಡ ಮತ್ತೊಂದು ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಏರು ಗತಿಯಲ್ಲಿರುವ ಚಿನ್ನ ಮತ್ತು ಬೆಳ್ಳಿ ದರಗಳು ತುಸು ಏರಿಳಿತ ಕಂಡರೂ ಸದ್ಯಕ್ಕಂತೂ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಗಳು ವಿರಳ ಎಂದು ಹೇಳಲಾಗುತ್ತಿದೆ.
