Thursday, January 8, 2026
Homeರಾಜ್ಯ5 ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸ ಇದೆ, ಮಿಕ್ಕಿದ್ದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದು : ಸಿದ್ದರಾಮಯ್ಯ

5 ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸ ಇದೆ, ಮಿಕ್ಕಿದ್ದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದು : ಸಿದ್ದರಾಮಯ್ಯ

I am confident of completing my 5-year term, the rest is up to the high command's decision: Siddaramaiah

ಮೈಸೂರು, ಜ.6- ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ಐದು ವರ್ಷ ಅವಧಿ ಪೂರ್ಣಗೊಳಿಸುವ ವಿಶ್ವಾಸವೂ ಇದೆ. ಆದರೆ ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಖಲೆಗಳನ್ನು ಮುರಿಯಬೇಕೆಂದು ತಾವು ರಾಜಕೀಯ ಮಾಡಿಲ್ಲ. ಎಲ್ಲವೂ ಕಾಕತಾಳಿಯ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್‌ ಅರಸ್‌‍ ಅವರು ಎಷ್ಟು ದಿನ ಆಡಳಿತ ನಡೆಸಿದ್ದರು ಎಂಬುದು ಗೊತ್ತಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ್‌ ಅರಸು ಅವರ ದಾಖಲೆಯನ್ನು ಮೀರುವ ಅವಕಾಶ ನನಗೆ ಸಿಕ್ಕಿದೆ ಎಂದರು.

ಪೂರ್ಣಾವಧಿ ಮುಖ್ಯಮಂತ್ರಿಯಾಗಿರುವ ಬಗ್ಗೆ ಹೈಕಮಾಂಡ್‌ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸ ಇದೆ. ತಮಗೆ ಹೈಕಮಾಂಡ್‌ ಮೇಲೆ ವಿಶ್ವಾಸ ಇದೆ ಇಲ್ಲದೆ ಹೋಗಿದ್ದರೆ ಮುಖ್ಯಮಂತ್ರಿಯಾಗಿ ಹೇಗೆ ಇರುತಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಧಿಕಾರವಧಿ ಪೂರ್ಣಗೊಳಿಸುವುದು ಹೈಕಮಾಂಡ್‌ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದರು. ತಾವು ಹೆಚ್ಚಿನ ಅಧಿಕಾರವಧಿ ನಡೆಸಿದ ದಾಖಲೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಎಲ್ಲೆಡೆ ನಾಟಿ ಕೋಳಿ ಔತಣ ಕೂಟ ಆಯೋಜಿಸುತ್ತಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಯಾರು ಎಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

ತಾವು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರಾಗಿದ್ದು, ಹಳ್ಳಿಗಳ ಕಡೆ ನೆಂಟರು ಬಂದಾಗ ನಾಟಿ ಕೋಳಿ ಊಟ ಮಾಡಲಾಗುತ್ತಿತ್ತು. ನನಗೆ ರಾಗಿಮುದ್ದೆ, ನಾಟಿ ಕೋಳಿ ಮೊದಲು ತುಂಬಾ ಇಷ್ಟವಾಗುತ್ತಿತ್ತು. ಈಗ ಇಲ್ಲ ಎಂದರು. ಗ್ರಾಮೀಣ ಭಾಗದ ಎಲ್ಲರಿಗೂ ನಾಟಿ ಕೋಳಿ ಇಷ್ಟವಾಗುತ್ತದೆ. ನಾನು ಮುಖ್ಯಮಂತ್ರಿ ಆಗಿರುವುದರಿಂದ ನನ್ನ ಇಷ್ಟ-ಕಷ್ಟಗಳು ಹೆಚ್ಚು ಚರ್ಚೆಯಾಗುತ್ತಿವೆ ಎಂದರು.

ಸುದೀರ್ಘ ರಾಜಕಾರಣದಲ್ಲಿನ ಸೇವೆ ತಮಗೆ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದೇ ಖುಷಿ. ರಾಜಕಾರಣ ಎಂದರೆ ಬಡವರು, ಹಿಂದುಳಿದವರು, ದಲಿತರು ರೈತರಿಗೆ ನ್ಯಾಯ ಕೊಡಿಸುವುದು. ಜನರ ಆಶೀರ್ವಾದದಿಂದ ತಾವು ಅವಕಾಶ ಸಿಕ್ಕಿದೆ. ಸಮಾಜದಲ್ಲಿ ಅಸಮಾನತೆ ಇದೆ ಜನರಿಗೆ ನ್ಯಾಯ ಸಿಗುವವರೆಗೂ, ಅತಮಾನತೆ ಹೋಗುವವರೆಗೂ ನಾವು ಹೋರಾಟ ಮುಂದುವರಿಸಲಿದ್ದು, ಜನರ ಕೆಲಸ ಮಾಡುವುದಾಗಿ ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿ ಆಡಳಿತ ನಡೆಸಿ ದಾಖಲೆ ನಿರ್ಮಿಸುತ್ತೇನೆ ಎಂದು ಎಂದು ಕೊಂಡಿರಲಿಲ್ಲ. ಹೆಚ್ಚೆಂದರೆ ಒಂದು ಅವಧಿಗೆ ಶಾಸಕನಾಗಬೇಕು ಎಂಬ ಆಸೆ. ಶಾಸಕನಾದೆ ಅವಕಾಶ ಸಿಕ್ಕಾಗ ಸಚಿವನಾದೆ, ಉಪಮುಖ್ಯಮಂತ್ರಿಯಾಗಿ, ಕೊನೆಗೆ ಮುಖ್ಯಮಂತ್ರಿಯೂ ಆದೆ. ಈ ನಡುವೆ ವಿರೋಧ ಪಕ್ಷದ ನಾಯಕನಾಗಿಯೂ ಕೆಲಸ ಮಾಡಿದ್ದೇನೆ. ದೇವರಾಜ ಅರಸು ಅವರು ಮೈಸೂರಿನವರು ನಾನು ಮೈಸೂರಿನವನು. ಇಬ್ಬರು ಮುಖ್ಯಮಂತ್ರಿ ಆಗಿರುವುದು ಬೇರೆ ಬೇರೆ ಕಾಲಘಟ್ಟದಲ್ಲಿ. ದೇವರಾಜ್‌ ಅರಸು 1972 ರಿಂದ 1980ರವರೆಗೂ ಮುಖ್ಯಮಂತ್ರಿ ಆಗಿದ್ದರು. ನಾನು 2013 ರಿಂದ 2018ರ ವರೆಗೂ ಮತ್ತು 2023ರಿಂದ ಈವರೆಗೂ ಮುಖ್ಯಮಂತ್ರಿಯಾಗಿದ್ದೇನೆ. ಮುಂದೆ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಪುನರುಚ್ಚರಿಸಿದರು.

ಬಜೆಟಿನಲ್ಲಿ ಹೊಸ ಘೋಷಣೆ ಮಾಡುವ ಬಗ್ಗೆ ಆಯವ್ಯಯ ಮಂಡನೆಯ ದಿನ ನೋಡಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಬಳ್ಳಾರಿಯಲ್ಲಿ ನಡೆದ ಬ್ಯಾನರ್‌ ಗಲಾಟೆಗೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ. ಕೆಲವರನ್ನು ಬಂಧಿಸಲಾಗಿದೆ. ವಿಶೇಷ ಪ್ರತ್ಯೇಕ ತನಿಖೆಯ ಬಗ್ಗೆ ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಲಾಗುವುದು. ಈಗಾಗಲೇ ತನಿಖೆ ಪ್ರಗತಿಯಲ್ಲಿರುವುದರಿಂದ ಅದು ಮುಂದುವರೆಯಲಿ ಎಂದರು.

ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಅವರ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಿದ್ದ ಕುರಿತು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಪ್ರಶ್ನೆಸಿರುವುದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು, ಜೆಡಿಎಸ್‌‍ ಮತ್ತು ಬಿಜೆಪಿಯವರು ಎಂದಿಗೂ ಕಾನೂನು ರೀತಿಯಲ್ಲಿ ಮಾತನಾಡುವುದಿಲ್ಲ. ರಾಜಕೀಯವಾಗಿ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು,

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ವೈನಾಡು ಕ್ಷೇತ್ರದಿಂದ ಬೆಂಗಳೂರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಮೈಸೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿ ನಾವು ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇವೆ. ಈ ವೇಳೆ ಸಚಿವ ಸಂಪುಟ ಪುನರ್‌ ರಚನೆ ಕುರಿತಂತೆ ಯಾವುದೇ ವಿಚಾರಗಳು ಚರ್ಚೆಯಾಗಿಲ್ಲ ಎಂದರು.ಹೈಕಮಾಂಡ್‌ ನಾಯಕರು ದೆಹಲಿಗೆ ತಮನ್ನು ಕರೆದರೆ, ಆ ಸಂದರ್ಭದಲ್ಲಿ ಸಂಪುಟ ಪುನರ್‌ ರಚನೆ ಕುರಿತು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.ಬೋಗಾದಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲುಶಿತ ನೀರು ಸೇವಿಸಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುವುದಾಗಿ ಹೇಳಿದರು.

RELATED ARTICLES

Latest News