ಬೆಂಗಳೂರು, ಡಿ.21- ನಾನು ಯಾವುದಕ್ಕೂ ರಾಜಿಯಾಗಲ್ಲ. ಹಿಂದೆ ಆಡಿದ ಮಾತಿಗೆ ಈಗಲೂ ಬದ್ಧ. ನಾನು ಯಾವಾಗಲೂ ಸಿದ್ದರಾಮಯ್ಯ ಪರ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ನಿನ್ನೆಯಷ್ಟೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದ ರಾಜಣ್ಣ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಎಷ್ಟೇ ಪ್ರಯತ್ನ ಮಾಡಿದರೂ ನನ್ನ ನಿಲುವು ಬದಲಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಸಿಎಂ ಕುರ್ಚಿ ಹಗ್ಗ-ಜಗ್ಗಾಟ ನಡೆಯುತ್ತಿರುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹುಡುಕಿಕೊಂಡು ಬಂದಿರಲಿಲ್ಲ. ಪಕ್ಷದ ಅಧ್ಯಕ್ಷರಾಗಿ ಯಾರನ್ನು ಬೇಕಾದರೂ ಮಾತನಾಡಿಸಬಹುದು. ಪಕ್ಷ ಸಂಘಟನೆ ವಿಚಾರವಾಗಿ ನನ್ನ ಜತೆ ಮಾತನಾಡಿದ್ದಾರೆ. ಅದಕ್ಕೆ ನಾನು ಆಯ್ತು ಎಂದಿದ್ದೇನೆಯೇ ಹೊರತು ಬೇರೇನೂ ಚರ್ಚೆ ನಡೆದಿಲ್ಲ ಎಂದು ಹೇಳಿದರು.
ನಾನು ಯಾವಾಗಲೂ ಸಿದ್ದರಾಮಯ್ಯ ಪರವಾಗಿ ಇರುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಡಿನ್ನರ್ ಪಾರ್ಟಿಗೆ ಹೋಗಿದ್ದರ ಬಗ್ಗೆ ಹೆಚ್ಚೇನೂ ಅರ್ಥ ಕಲ್ಪಿಸಬೇಡಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಈಗಾಗಲೇ ನಾನು ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ. ಹೈಕಮಾಂಡ್‌ನವರ ಮಾತು ಕೇಳುತ್ತೇನೆ ಎಂದು ಹೇಳಿದ್ದಾರೆ. ಹೀಗಿರುವಾಗ ಹೆಚ್ಚಾಗಿ ಮಾತನಾಡುವುದು ಬೇಡ. ಆದರೆ, ಸಿದ್ದರಾಮಯ್ಯ ಅವರ ಪರವಾಗಿ ನಾನು ಸದಾ ಇರುತ್ತೇನೆ ಎಂದು ಹೇಳಿದ್ದಾರೆ.
