Friday, January 23, 2026
Homeರಾಜ್ಯಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ

ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ

Instructions to form an expert committee to control air pollution in Bengaluru

ಬೆಂಗಳೂರು,ಡಿ.7– ಬೆಂಗಳೂರಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕ್ರಮ ಕೈಗೊಂಡಿದ್ದು, ಇದಕ್ಕೆ ತಜ್ಞರ ಸಮಿತಿ ರಚನೆಗೆ ಸೂಚನೆ ನೀಡಿದ್ದಾರೆಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.

ರಾಷ್ಟ್ರದ ಉದ್ಯಾನನಗರಿ ಹಾಗೂ ಸಿಲಿಕಾನ್‌ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ಕುರಿತು ಗೂಳಿಗೌಡರು ಮಾಡಿದ ಮನವಿಗೆ ಡಿಸಿಎಂ ಸ್ಪಂದಿಸಿದ್ದು, ತುರ್ತು ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

ದೆಹಲಿಯಂತೆಯೇ ಬೆಂಗಳೂರು ಸಹ ಭವಿಷ್ಯದಲ್ಲಿ ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ದಿನೇಶ್‌ ಗೂಳಿಗೌಡ ಅವರು ಡಿಸಿಎಂ ಅವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಧನಾತಕವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಮುಖ್ಯ ಕಾರ್ಯದರ್ಶಿಗಳ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಬೆಂಗಳೂರಿನ ವಾಯು ಮಾಲಿನ್ಯದ ಅಪಾಯವನ್ನು ತಡೆಗಟ್ಟಲು ತುರ್ತು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ರಚಿಸುವಂತೆ ಆದೇಶಿಸಿದ್ದಾರೆ.

ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಸ್ಫೋಟ: ನಗರದಲ್ಲಿ 1,23,24,919 ನೋಂದಾಯಿತ ಮೋಟರ್‌ ವಾಹನಗಳಿವೆ. ಇವುಗಳಿಂದ ಉಂಟಾಗುವ ಮಾಲಿನ್ಯದಿಂದಾಗಿ ಮಕ್ಕಳು, ಹಿರಿಯರು ಉಸಿರಾಟದ ತೊಂದರೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಪರಿಸರ ವಿಜ್ಞಾನಿಗಳು, ಸಂಚಾರ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕು, ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ ಸಮಗ್ರ ಸ್ವಚ್ಛ-ವಾಯು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜಧಾನಿ ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಿಸಲು ತಜ್ಞರ ಸಮಿತಿಗೆ ರಚನೆಗೆ ಸೂಚನೆ ನೀಡಿದ್ದಾರೆ.

RELATED ARTICLES

Latest News