ಬೆಳಗಾವಿ, ಡಿ.11– ಕಾಣುವ ಕುರ್ಚಿಯಲ್ಲಿ ಕೂರಬಲ್ಲನೆ ಒಂದು ದಿನ ಎಂಬ ಕನಸಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ದೈನಂದಿನ ಶೈಲಿಯನ್ನು ಬದಲಾಯಿಸಿ ನಯ-ವಿನಯ ರೂಢಿಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ವ್ಯಂಗ್ಯವಾಡಿದ ಪ್ರಸಂಗ ನಡೆಯಿತು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡುವಾಗ ಮೇಕೆದಾಟು ಯೋಜನೆ ಮುಂದಿಟ್ಟುಕೊಂಡು ಹೋರಾಟ ಮಾಡಿ, ಕಾಂಗ್ರೆಸ್ ಪಕ್ಷ ಮತ ಪಡೆದು ಗೆದ್ದಿದೆ. ಸುಪ್ರೀಂಕೋರ್ಟ್ ಈಗ ತಮಿಳುನಾಡಿನ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಇನ್ನೂ ಮುಂದಾದರು ರಾಜ್ಯ ಸರ್ಕಾರ ಮೇಕೆೆದಾಟು ಯೋಜನೆಯನ್ನು ಪ್ರಾರಂಭ ಮಾಡಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅರವಿಂದ್ ಬೆಲ್ಲದ್ ಅವರು ಮುಖ್ಯಮಂತ್ರಿಯಾಗಲು, ಅನಂತರ ವಿರೋಧ ಪಕ್ಷದ ನಾಯಕರಾಗುವ ಪ್ರಯತ್ನ ನಡೆಸಿದ್ದರು. ಅವರಿಗೆ ಅನುಭವ ಇದೆ. ನಾನು ಅರವಿಂದ್ ಅವರ ತಂದೆಯವರ ಜೊತೆ ಶಾಸಕನಾಗಿ ಕೆಲಸ ಮಾಡಿದೇನೆ. ರಾಜ್ಯ ಸರ್ಕಾರದ ಪ್ರಯತ್ನದಿಂದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮೇಕೆದಾಟು ಯೋಜನೆಗೆ ಆರು ತಿಂಗಳ ಒಳಗಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಡಬ್ಲ್ಯೂಸಿ ನಿರ್ದೇಶನ ನೀಡಿದೆ. ಯೋಜನೆ ವಿಚಾರದಲ್ಲಿ ಮೂಗು ತೂರಿಸಲು ಬಯಸುವುದಿಲ್ಲ, ಅಷ್ಟು ತಾಂತ್ರಿಕತೆ ನ್ಯಾಯಾಲಯಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದೆ.
ನಾನು ನಿಮೆಲ್ಲರಿಗೂ ನಮ್ರತೆಯಿಂದ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಿಡಬ್ಲ್ಯೂಸಿ ಮುಂದೆ ಎಲ್ಲಾ ದಾಖಲೆಗಳನ್ನು ಮಂಡಿಸುತ್ತೇನೆ. ಪರಿಷ್ಕೃತ ಯೋಜನಾ ವರದಿಯನ್ನು ಸಲ್ಲಿಸುತ್ತೇನೆ. ಎಲ್ಲರೂ ಸೇರಿ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿದರೆ. ನಿಮೆಲ್ಲರನ್ನು ಕರೆದುಕೊಂಡು ಹೋಗಿ ಯೋಜನೆಗೆ ಭೂಮಿ ಪೂಜೆ ಮಾಡುತ್ತೇನೆ ಎಂದು ಕೈ ಮುಗಿದು ಕೇಳಿಕೊಂಡರು.
ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ವಿ.ಸುನಿಲ್ ಕುಮಾರ್ ಇಷ್ಟು ನಯ-ವಿನಯ ಅದೆಲ್ಲಿಂದ ಬಂತು. ಕೈಮುಗಿದು ನಯ-ವಿನಯವಾಗಿ ಕೇಳುತ್ತಿದ್ದಾರೆ. ಇದು ನಿಜವಾದ ಡಿ.ಕೆ. ಶಿವಕುಮಾರ್ ಅವರೇನಾ ? ಅಥವಾ ಹೊಸ ರೂಪವೇ ಎಂದು ಪ್ರಶ್ನಿಸಿದರು.
ನಿಮಿಂದಲೇ ಇದೆಲ್ಲಾ ಕಲಿತಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ಇದನ್ನು ಒಪ್ಪದಾ ಸುನಿಲ್ ಕುಮಾರ್, ನಮಗೆಲ್ಲ ಡಿ.ಕೆ.ಶಿವಕುಮಾರ್ ಎಂದರೆ ಒಂದು ಕಲ್ಪನೆ ಇದೆ. ಇಷ್ಟು ನಯ-ವಿನಯ ಹೇಗೆ ಬಂತು ಎಂದು ಪದೇ ಪದೇ ಕೇಳಿದರು.
ಸಿ.ಅಶ್ವಥ್ ಅವರ ಒಂದು ಹಾಡಿದೆ. ಅದರಲ್ಲಿ ಕಾಣದ ಕಡಲಿಗೆ ಹಂಬಲಿಸಿದೆ ಮನ. ಸೇರಬಲ್ಲನೆ ಒಂದು ದಿನ ಎಂಬ ಸುಂದರ ಸಾಲುಗಳಿವೆ. ಈಗ ಡಿ.ಕೆ.ಶಿವಕುಮಾರ್ ಅವರು… ಕಾಣುವ ಕುರ್ಚಿಗೆ ಹಂಬಲಿಸಿದೆ ಮನ, ಕೂರಬಲ್ಲನೆ ಒಂದು ದಿನ, ಕೂರಬಲ್ಲನೆ ಒಂದು ದಿನ ಎಂದು ಹಾಡಲು ಹೊರಟಿದ್ದಾರೆ. ಹೀಗಾಗಿ ನಯ-ವಿನಯ ಶುರುವಾಗಿದೆಯೇ ಅಥವಾ ನಿಜವಾಗಿಯೂ ನೀರಾವರಿ ಯೋಜನೆಗಳ ಕಾಳಜಿಯೇ ಅಥವಾ ವಿರೋಧ ಪಕ್ಷಗಳ ಬಗ್ಗೆ ನಯ-ವಿನಯವೋ ಎಂದು ಲೇವಡಿ ಮಾಡಿದರು.
ನಾವು ನಿಮ ಗತ್ತು ಗೈರತ್ತಿನ ನಾಯಕತ್ವ ಒಪ್ಪಿಕೊಂಡಿದ್ದೇವೆ. ಈಗ ಕೈ ಮುಗಿದು ನಯ-ವಿನಯ ತೋರಿಸಿದರೆ ಹೇಗೆ ಎಂದು ಪ್ರಶ್ನಿಸಿದರು.ಇದು ಮೇಕೆದಾಟು ಯೋಜನೆಗೆ ಮಾತ್ರ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ಹಿರಿಯ ಸದಸ್ಯ ಎಸ್.ಸುರೇಶ್ ಕುಮಾರ್, ಇಮೇಜ್ ಮೇಕ್ ಓವರ್ ಗಾಗಿ ಕೆಲವು ಸಂಸ್ಥೆಗಳ ನೆರವು ಪಡೆಯಲಾಗುತ್ತದೆ. ಸಲಹೆಗಳು ಇರುತ್ತವೆ. ಡಿ.ಕೆ.ಶಿವಕುಮಾರ್ ಅವರು ಕೊರಳಿಗೆ ಶಲ್ಯ ಹಾಕಿಕೊಂಡಿರುವುದು ಕೂಡ ಇದರ ಭಾಗವೇ ಎಂದು ಕೇಳಿದರು.
ಅರವಿಂದ್ ಬೆಲ್ಲದ್, ಕೇಂದ್ರದಲ್ಲಿ ಜಲಶಕ್ತಿ ಸಚಿವರಾಗಿರುವ ಸಿ.ಆರ್.ಪಾಟೀಲ್ ಅವರೊಂದಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತಮ ಬಾಂಧವ್ಯ ಇದೆ. ಅದನ್ನು ಮೇಕೆದಾಟು ಯೋಜನೆಗೆ ಬಳಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮತ್ತೆ ಎದ್ದು ನಿಂತ ಡಿ.ಕೆ.ಶಿವಕುಮಾರ್, ನಾವು ನೀವು ಎಲ್ಲರಿಗೂ ಕಾವೇರಿ, ಮಹದಾಯಿ, ಕೃಷ್ಣ ಯೋಜನೆಗಳು ಬೇಕು. ನಾವೆಲ್ಲರೂ ಹೋರಾಡುವುದು ಜನರಿಗಾಗಿ, ಒಟ್ಟಾಗಿ ಕೆಲಸ ಮಾಡೋಣ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಬೆಲ್ಲದ್, ಆದರೆ ಎಲ್ಲದಕ್ಕೂ ಹಣ ಬೇಕು. ನೀರಾವರಿ ಯೋಜನೆಗಳಿಗೆ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಅಗತ್ಯವಿದೆ. ಅದನ್ನು ಎಲ್ಲಿಂದ ಒದಗಿಸುತ್ತೀರಾ ಎಂದು ಪ್ರಶ್ನಿಸಿದ್ದರು.
