ಬೆಂಗಳೂರು,ಜ.9-ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಸಿಎಆರ್ ಕೇಂದ್ರಸ್ಥಾನದ ಕವಾಯತು ಮೈದಾನದಲ್ಲಿಂದು ಏರ್ಪಡಿಸಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುತ್ತೀರಿ, ಸಾಕಷ್ಟು ಮಟ್ಟದಲ್ಲಿ ಮಾಲುಗಳನ್ನು ವಶಪಡಿಸಿಕೊಳ್ಳುತ್ತೀರಿ. ಆದರೆ ಬಹುತೇಕ ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮುಂದೆ ಎಲ್ಲಿಯೂ ಲೋಪವಾಗದಂತೆ ಪ್ರಕರಣದ ತನಿಖೆಯನ್ನು ಸರಿಯಾದ ರೀತಿ ನಡೆಸಿ ದೋಷಾರೋಪಣ ಪಟ್ಟಿ ತಯಾರಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ತನಿಖಾಧಿಕಾರಿಗಳು ಕೆಲಸ ನಿರ್ವಹಿಸಬೇಕೆಂದು ಇದೇ ವೇಳೆ ಸಲಹೆ ನೀಡಿದರು.ಒಂದು ವೇಳೆ ತನಿಖೆಯಲ್ಲಿ ಲೋಪವಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಅಪರಾಧಗಳನ್ನು ಕಡಿಮೆ ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯ. ನಾವೆಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಯಾವುದೇ ಘಟನೆಯಾದರೂ ಮಾಹಿತಿ ಬಂದ ತಕ್ಷಣ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಮಾಂಡ್ ಸೆಂಟರ್, ಹೊಯ್ಸಳ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ.ಜನರಿಗೆ ಸ್ಪಂದಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಮಾಂಡ್ ಸೆಂಟರ್ ಹಾಗೂ ಹೊಯ್ಸಳ ಸಿಬ್ಬಂದಿ ಇನ್ನೂ ಹೆಚ್ಚಾಗಿ ಜನ ಮೆಚ್ಚುವ ರೀತಿ ಕರ್ತವ್ಯ ನಿರ್ವಹಿಸುವ ಮೂಲಕ ಜನಸ್ನೇಹಿ ಪೊಲೀಸ್ ಆಗಬೇಕು ಎಂದು ಅವರು ಸೂಚಿಸಿದರು.
ನೊಂದು ಪೊಲೀಸ್ ಠಾಣೆಗೆ ಬರುವವರಿಗೆ ಗೌರವ ಕೊಡಬೇಕು,ಅವರ ಸಮಸ್ಯೆ ಆಲಿಸಬೇಕು,ಎಲ್ಲರಿಗೂ ನಾವು ಮಾದರಿಯಾಗಬೇಕು, ಪೊಲೀಸರು ತಪ್ಪು ಮಾಡಿದರೆ ಸಾರ್ವಜನಿಕರು ಸಹಿಸುವುದಿಲ್ಲ.
ಬೆಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ ಎಂದು ಅವರು ಹೇಳಿದರು.ಹೊಸವರ್ಷಾಚರಣೆ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಆಯುಕ್ತರು ಇದೇ ವೇಳೆ ತಿಳಿಸಿದರು.
