Monday, December 22, 2025
Homeರಾಜ್ಯಬೆಂಗಳೂರಲ್ಲೇ ಐಪಿಎಲ್‌, ವಿಜಯ್‌ ಹಜಾರೆ ಟ್ರೋಫಿ ಪಂದ್ಯ : ಅಧಿಕಾರಿಗಳ ಜೊತೆ ಗೃಹ ಸಚಿವ ಪರಮೇಶ್ವರ್‌...

ಬೆಂಗಳೂರಲ್ಲೇ ಐಪಿಎಲ್‌, ವಿಜಯ್‌ ಹಜಾರೆ ಟ್ರೋಫಿ ಪಂದ್ಯ : ಅಧಿಕಾರಿಗಳ ಜೊತೆ ಗೃಹ ಸಚಿವ ಪರಮೇಶ್ವರ್‌ ಸಭೆ

IPL, Vijay Hazare Trophy match in Bengaluru: Home Minister Parameshwara meets officials

ಬೆಂಗಳೂರು,ಡಿ.22- ಐಪಿಎಲ್‌ ಮತ್ತು ವಿಜಯ್‌ ಹಜಾರೆ ಕ್ರಿಕೆಟ್‌ ಪಂದ್ಯಗಳನ್ನು ಬೆಂಗಳೂರಿನಲ್ಲೇ ನಡೆಸಲು ಪೂರಕವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಇಂದು ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.ಆರ್‌ಸಿಬಿ ಐಪಿಎಲ್‌ ಕಪ್‌ ಗೆದ್ದ ಸಂದರ್ಭದಲ್ಲಿ ವಿಜಯೋತ್ಸವ ಆಚರಿಸುವಾಗ ಜೂನ್‌ 4ರಂದು ಬೆಂಗಳೂರಿನಲ್ಲಿ ಕಾಲ್ತುಳಿತವಾಗಿ ಹಲವರ ಜೀವ ಹಾನಿಯಾಗಿತ್ತು.

ಅದರ ನಂತರ ಐಪಿಎಲ್‌ ಪಂದ್ಯಾವಳಿಗಳನ್ನು ಬೆಂಗಳೂರಿನಲ್ಲಿ ನಡೆಸಲು ಅನುಮತಿ ನಿರಾಕರಿಸ ಲಾಗಿತ್ತು.ಇದೇ 24 ರಿಂದ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಗಳು ನಡೆಯಲಿದೆೆ. ಆ ಆಟದ ಪಂದ್ಯಗಳನ್ನು ಪ್ರೇಕ್ಷಕರ ರಹಿತವಾಗಿ ಬೆಂಗಳೂರಿನಲ್ಲೂ ನಡೆಸಲು ಅನುಮತಿ ನೀಡುವಂತೆ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಮನವಿ ಮಾಡಿದೆ.

ಇದನ್ನು ಪರಿಶೀಲಿಸಲು ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಶ್ರೀಮಂತ ಕುಮಾರ್‌ ಸಿಂಗ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಜಿಬಿಎ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ.ಈ ನಡುವೆ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಹೋಮ ಹವನಗಳನ್ನು ನಡೆಸಲಾಗಿದೆ. ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಪೂಜಾದಿ ಕಾರ್ಯಗಳ ನೇತೃತ್ವ ವಹಿಸಿದ್ದರು.

ಇದರ ನಡುವೆ ಗೃಹ ಸಚಿವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಪ್ರೇಕ್ಷಕರಿಲ್ಲದೆ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿ ನಡೆಸಲು ಅನುಮತಿ ನೀಡುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಂಗ ಆಯೋಗ ತನ್ನ ವರದಿಯಲ್ಲಿ ನೀಡಿರುವ ಶಿಫಾರಸುಗಳನ್ನು ಆಧರಿಸಿ ಮುಂಜಾಗ್ರತೆ ತೆಗೆದುಕೊಳ್ಳಬೇಕು ಮತ್ತು ಜನಸಂದಣಿಯನ್ನು ನಿಭಾಯಿಸಲು ಇತ್ತೀಚಿಗೆ ವಿಧಾನ ಮಂಡಲದಲ್ಲಿ ಅಂಗೀಕರಿಸಲಾದ ಮಸೂದೆಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

RELATED ARTICLES

Latest News