Friday, January 23, 2026
Homeರಾಜ್ಯಮೈಸೂರು ಸಿಲ್ಕ್ ಸೀರೆ ಕೊರತೆಯ ಹಿಂದೆ ಖಾಸಗಿ ಲಾಬಿ.. ?

ಮೈಸೂರು ಸಿಲ್ಕ್ ಸೀರೆ ಕೊರತೆಯ ಹಿಂದೆ ಖಾಸಗಿ ಲಾಬಿ.. ?

Is private lobby behind Mysore silk saree shortage?

ಉಮೇಶ್‌ ಕೋಲಿಗೆರೆ
ಬೆಂಗಳೂರು,ಜ.23- ಕೆಎಸ್‌‍ಐಸಿಯ ಸಿಲ್ಕ್ ಸೀರೆಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದ್ದರೂ, ಅಗತ್ಯದಷ್ಟು ಪೂರೈಕೆ ಮಾಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಕಾಣದ ಶಕ್ತಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ದೇಶದಲ್ಲೇ ತಮಿಳುನಾಡಿನ ತಿರ್ಪುರ್‌, ಗುಜರಾತ್‌ನ ಸೂರತ್‌ ಬಟ್ಟೆ ಉದ್ಯಮದಲ್ಲಿ ಏಕಸ್ವಾಮ್ಯತೆ ಸಾಧಿಸಿವೆ. ಕರ್ನಾಟಕದಲ್ಲಿ ಬಳ್ಳಾರಿಯ ಜೀನ್ಸ್ ಬ್ರ್ಯಾಂಡ್‌ ಅವನತಿಯತ್ತ ಹೆಜ್ಜೆ ಹಾಕಿದೆ.

ಹಿಂದೊಮೆ ವೈಭೋಗದಲ್ಲಿದ್ದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಪ್ರಿಯದರ್ಶಿನಿ ಮಾರಾಟ ಮಳಿಗೆಗಳು ಈಗ ಧೂಳು ಹೊಡೆಯುತ್ತಿವೆ. ಗ್ರಾಹಕರ ಬೇಡಿಕೆಯ ಹೊರತಾಗಿಯೂ ಮಾರಾಟ ಮಳಿಗೆಗಳು ಅಭಿವೃದ್ಧಿ ಕಾಣದೆ ಸೊರಗುತ್ತಿವೆ. ನುರಿತ ಸಿಬ್ಬಂದಿಗಳು ಮತ್ತು ಮಾರುಕಟ್ಟೆ ಕೌಶಲ್ಯವಿಲ್ಲದೆ ಉದ್ದೇಶ ಪೂರ್ವಕವಾಗಿಯೇ ಪ್ರಿಯದರ್ಶಿನಿ ಮಳಿಗೆಗಳನ್ನು ಬಲವಂತವಾಗಿ ಹಂತಹಂತವಾಗಿ ಮುಚ್ಚಿಸಲಾಗುತ್ತಿದೆ ಎಂಬ ಆರೋಪಗಳಿವೆ.

ಒಂದು ಕಾಲದಲ್ಲಿ ರಾಜ್ಯಾದ್ಯಂತ ನೂರಕ್ಕಿಂತಲೂ ಹೆಚ್ಚಿನ ಮಾರಾಟ ಮಳಿಗೆಗಳಿದ್ದವು. ಈಗ ಅವುಗಳ ಸಂಖ್ಯೆ ಬೆರಳೆಣಿಕೆಗೆ ಇಳಿದಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮೂರು ಮಳಿಗೆಗಳು ಜೀವಂತವಾಗಿವೆ. ಪ್ರಿಯದರ್ಶಿನಿ ಉತ್ಪನ್ನಗಳ ಖರೀದಿಗೆ ಈಗಲೂ ಹೆಚ್ಚಿನ ಬೇಡಿಕೆ ಇದೆ. ಆದರೆ ಖಾಸಗಿ ಮಾರುಕಟ್ಟೆಯ ಒತ್ತಡಕ್ಕೆ ಮಣಿದು ಸರಿಯಾದ ಬೇಡಿಕೆ ಪೂರೈಸದೆ ಸರ್ಕಾರಿ ಉದ್ಯಮವನ್ನು ನಾಶ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಲೋಕಲ್‌ ಫಾರ್‌ ವೋಕಲ್‌ ಎಂದು ಪ್ರಚಾರ ಮಾಡುತ್ತಾರೆ. ವಿಕಸಿತ ಭಾರತಕ್ಕಾಗಿ ಆತನಿರ್ಭರತೆ ಅಗತ್ಯ. ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮೇಕ್‌ ಇನ್‌ ಇಂಡಿಯಾ ಜಾಗೃತವಾಗಬೇಕು ಎಂದೆಲ್ಲಾ ಪ್ರತಿಬಾರಿಯೂ ಉಲ್ಲೇಖಿಸುತ್ತಾರೆ. ಪ್ರಧಾನಿಯವರನ್ನು ವಿರೋಧಿಸುವ ಭರದಲ್ಲಿ ಅವರ ಮಾತಿಗೆ ಬೆಲೆ ಕೊಡಬಾರದು ಎಂಬ ಕಾರಣಕ್ಕಾಗಿಯೇ ರಾಜ್ಯ ಕಾಂಗ್ರೆಸ್‌‍ ಸರ್ಕಾರ ದೇಶೀಯ ಉತ್ಪನ್ನಗಳನ್ನು ನಾಶ ಮಾಡುತ್ತಿದೆಯೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ಮುಗಿಲು ಮುಟ್ಟಿದ ಬೇಡಿಕೆ:
ಕೆಎಸ್‌‍ಐಸಿ ಅರ್ಥಾತ್‌ ಮೈಸೂರು ಸಿಲ್ಕ್ ಸೀರೆ ಖರೀದಿಗೆ ಗ್ರಾಹಕರು ಬೆಳಗಿನ ಜಾವ ಮರಗಟ್ಟಿಸುವ ಚಳಿಯನ್ನೂ ಲೆಕ್ಕಿಸದೇ ಮಾರಾಟ ಮಳಿಗೆಗಳ ಮುಂದೆ ಸಾಲುಗಟ್ಟಿ ಕುಳಿತಿರುತ್ತಾರೆ ಎಂದರೆ ಅದರ ಬೇಡಿಕೆ ಯಾವ ಮಟ್ಟಿಗೆ ಇದೆ ಎಂಬುದನ್ನು ಅಂದಾಜು ಮಾಡಿಕೊಳ್ಳಬಹುದು.

ಯಾವುದೇ ಮಾರಾಟ ಸ್ಥಳದಲ್ಲಾದರೂ ಒಂದು ಖರೀದಿಸಿದಾಗ ಮತ್ತೊಂದನ್ನು ಖರೀದಿಸಲು ಉತ್ತೇಜನ ನೀಡಲಾಗುತ್ತದೆ. ಇಲ್ಲವೇ ಒಂದು ಖರೀದಿ ಮಾಡಿದರೆ ಮತ್ತೊಂದು ಉಚಿತ ಎಂಬ ಕೊಡುಗೆಗಳನ್ನು ಘೋಷಿಸುವುದು ಕಂಡು ಬರುತ್ತದೆ. ಆದರೆ ಕೆಎಸ್‌‍ಐಸಿ ಮಳಿಗೆಗಳಲ್ಲಿ ಒಬ್ಬ ಗ್ರಾಹಕರಿಗೆ ಒಂದೇ ಸೀರೆ ಎಂಬ ನಿಯಮ ರೂಪಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಒಂದು ಸೀರೆಗೆ 40 ಸಾವಿರದಿಂದ ಎರಡೂವರೆ ಲಕ್ಷ ರೂ.ಗಳಷ್ಟು ಬೆಲೆ ಇದ್ದರೂ, ಗ್ರಾಹಕರು ಹಣದ ಮುಖ ನೋಡದೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಕೆಎಸ್‌‍ಐಸಿಗೆ ಜಿಯಾಗ್ರಾಫಿಕಲ್‌ ಇಂಡಿಕೇಷನ್‌ ದೊರೆತ ನಂತರವಂತೂ ಬೇಡಿಕೆ ಮುಗಿಲು ಮುಟ್ಟಿದೆ. ಪ್ರತಿ ಶನಿವಾರ ಹೊಸ ಸರಕು ಮಾರಾಟ ಮಳಿಗೆಗೆ ತಲುಪುತ್ತಿದ್ದಂತೆ ಅದನ್ನು ಬಾಚಿಕೊಳ್ಳಲು ಗ್ರಾಹಕರು ಮುಂಜಾನೆಯಿಂದಲೇ ಒಬ್ಬರ ಮೇಲೆ ಒಬ್ಬರು ಮುಗಿ ಬೀಳುತ್ತಿದ್ದಾರೆ.

ಮೈಸೂರಿನಲ್ಲಿ ಐದು, ಬೆಂಗಳೂರಿನಲ್ಲಿ ಎಂಟು, ಚನ್ನಪಟ್ಟಣ, ದಾವಣಗೆರೆ, ಚೆನ್ನೈ, ಹೈದರಾಬಾದ್‌ ಸೇರಿ ಇತರೆಡೆ ನಾಲ್ಕು ಕೆಎಸ್‌‍ಐಸಿ ಶೋರೂಂಗಳಿವೆ. ಎಲ್ಲ ಕಡೆಗಳಲ್ಲೂ ಬೇಡಿಕೆ ಹೆಚ್ಚುತ್ತಲೇ ಇದೆ.ಮದುವೆ ಹಾಗೂ ಇತರ ಶುಭ ಸಮಾರಂಭ ಕಾಲಮಾನದಲ್ಲಂತೂ ಮೈಸೂರು ಸಿಲ್‌್ಕ ಸೀರೆ ಖರೀದಿಸಲು ಯುದ್ಧವನ್ನೇ ಮಾಡಿದಷ್ಟು ಹರಸಾಹಸ ಪಡಬೇಕಿದೆ. ಕೆಲವರು ಕೆಎಸ್‌‍ಐಸಿಯೇ ಬೇಕು ಎಂದು ತಿಂಗಳುಗಟ್ಟಲೇ ಶೋರೂಂಗೆ ಭೇಟಿ ನೀಡಿ, ಬರಿಗೈನಲ್ಲಿ ವಾಪಸ್‌‍ ಬರುತ್ತಿದ್ದಾರೆ. ಆದರೂ ಹಠ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ.


ಖಾಸಗಿ ಲಾಬಿಗೆ ಮಣಿಯಿತೇ ಸರ್ಕಾರ ? :
ಇಷ್ಟೆಲ್ಲಾ ಬೇಡಿಕೆ ಇದ್ದರೂ ಅಗತ್ಯದಷ್ಟು ಪೂರೈಕೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಮತ್ತದೇ ಖಾಸಗಿ ಮಾರುಕಟ್ಟೆಯ ಲಾಬಿ ಕಾಣಿಸುತ್ತಿದೆ. ರೇಷೆ ಸೀರೆಗಳ ಮಾರುಕಟ್ಟೆಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ಜವಳಿ ಉದ್ಯಮ ಬಹುತೇಕ ಗುಜರಾತ್‌ ಮತ್ತು ರಾಜಸ್ಥಾನದ ವ್ಯಾಪಾರಿಗಳ ಕೈಯಲ್ಲಿದೆ. ಸ್ಥಳೀಯ ನೇಕಾರರು ಗಂಜಿಕಾಸಿಗೆ ಸೀರೆ ನೇಯ್ದುಕೊಡಬೇಕಾದ ಪರಿಸ್ಥಿತಿ ಇದೆ. ಅದನ್ನು ಸಂಸ್ಕರಿಸಿ ಮಾರಾಟ ಮಾಡುವ ನೆಪದಲ್ಲಿ ವ್ಯಾಪಾರಿಗಳು ಲಕ್ಷಾಂತರ ರೂ. ಲಾಭ ಮಾಡಿಕೊಳ್ಳುತ್ತಿದ್ದಾರೆ. ಬೇಡಿಕೆಯಷ್ಟು ಮೈಸೂರು ಸಿಲ್‌್ಕ ಪೂರೈಕೆಯಾದರೆ ಖಾಸಗಿ ವರ್ತಕರ ಲಾಭಕ್ಕೆ ಕನ್ನ ಬೀಳಲಿದೆ. ಅದಕ್ಕಾಗಿ ಮೂಲದಿಂದಲೇ ಲಾಬಿ ನಡೆಸಿ ಗ್ರಾಹಕರಿಗೆ ಅಗತ್ಯದಷ್ಟು ಸೀರೆಗಳು ಪೂರೈಕೆಯಾಗದಂತೆ ತಡೆಯಲಾಗುತ್ತಿದೆ ಎಂಬ ಆರೋಪಗಳಿವೆ.

ಕರ್ನಾಟಕ ರೇಷೆ ಕೈಗಾರಿಕಾ ನಿಗಮಕ್ಕೆ ಶಾಸಕಿ ಖನೀಜ್‌ ಫಾತೀಮಾ ಅಧ್ಯಕ್ಷರಾಗಿದ್ದಾರೆ. ಆರು ಐಎಎಸ್‌‍ ಅಧಿಕಾರಿಗಳು, ಒಬ್ಬ ಐಎಫ್‌ಎಸ್‌‍ ಅಧಿಕಾರಿ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿದ್ದಾರೆ. ಅಷ್ಟು ಮಂದಿ ಬುದ್ಧಿವಂತರಿದ್ದರೂ ಗ್ರಾಹಕರ ಬೇಡಿಕೆಯಷ್ಟು ಸೀರೆ ಪೂರೈಸದೆ ಕಣ್ಣು ಮುಚ್ಚಿಕುಳಿತಿರುವುದೇಕೆ ? ಎಂಬ ಪ್ರಶ್ನೆ ಕಾಡುತ್ತಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ, ಮೈಸೂರಿನ ಟಿ.ನರಸೀಪುರದಲ್ಲಿ ಕೆಎಸ್‌‍ಐಸಿ ಸಿಲ್‌್ಕ ಸೀರೆಗಳ ತಯಾರಿಕಾ ಘಟಕಗಳಿದ್ದವು. 2018ರಲ್ಲಿ ರಾಜ್ಯ ಬೇಡಿಕೆ ಪೂರೈಸಲು ಮೈಸೂರಿನಲ್ಲಿನ ಮಾನಂದವಾಡಿಯಲ್ಲಿನ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಿದೆ. ಪ್ರಸ್ತುತ ಮೂರು ಘಟಕಗಳಿಂದ ವಾರ್ಷಿಕ 5 ಸಾವಿರ ಸೀರೆಗಳನ್ನು ನೇಯುವ ಸಾಮರ್ಥ್ಯವಿದೆ. ಈ ಉತ್ಪಾದನೆ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಬೇಡಿಕೆ ಮತ್ತು ಮಾರಾಟ ಅತ್ಯುತ್ತಮವಾಗಿರುವಾಗಲೇ ಉತ್ಪಾದನೆ ಹೆಚ್ಚಿಸಿ ಸರ್ಕಾರಿ ಉದ್ಯಮವನ್ನು ಬೃಹದಾಕಾರವಾಗಿ ಬೆಳೆಸಲು ವಿಪುಲ ಅವಕಾಶಗಳಿವೆ. ಆದರೆ ಸರ್ಕಾರ ಮತ್ತು ನಿಗಮ ಖಾಸಗಿ ಲಾಬಿಗೆ ಮಣಿದು ಕುಂಟು ನೆಪ ಹೇಳುತ್ತಾ ಉತ್ಪಾದನೆಯನ್ನು ಕಡೆಗಣಿಸಿವೆ.

ನುರಿತ ನೇಕಾರರ ಕೊರತೆಯಿಂದ ಉತ್ಪಾದನೆ ಹೆಚ್ಚಿಸಲಾಗುತ್ತಿಲ್ಲ ಎಂಬ ಸಮರ್ಥನೆ ನೀಡಲಾಗುತ್ತಿದೆ. ಮೈಸೂರು ಸಿಲ್ಕ್ ಸೀರೆ ಗುಣಮಟ್ಟ ಕಾಯ್ದುಕೊಳ್ಳಬೇಕಾಗಿರುವುದರಿಂದ ನುರಿತ ಕುಶಲಗಾರರ ಅಗತ್ಯ ಇದೆ ಎಂಬ ಕಾರಣ ಒಪ್ಪಬಹುದಾದರೂ ನುರಿತ ನೇಕಾರರನ್ನು ನೇಮಿಸಿಕೊಳ್ಳುವುದು ಅಥವಾ ನೇಮಕವಾದವರಿಗೆ ತರಬೇತಿ ನೀಡುವುದು ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಮೂರು ಘಟಕಗಳಲ್ಲಿ 500ಕ್ಕಿಂತಲೂ ಕಡಿಮೆ ಸಿಬ್ಬಂದಿಗಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿವೆ. ಅದನ್ನು ನೇಕಾರರಿಗೆ ಕುಶಲತೆ ಹೆಚ್ಚಿಸಲು ಬಳಸಲು ಸಾಧ್ಯವಿಲ್ಲವೇ ? ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

ರಾಜ್ಯ ಸರ್ಕಾರ ಹೊಸ ಉತ್ಪಾದನಾ ಘಟಕಗಳನ್ನು ಆರಂಭಿಸಲು, ಮಾರಾಟ ಮಳಿಗೆಗಳ ಸಂಖ್ಯೆ ಹೆಚ್ಚಿಸಲು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇರುವ ಘಟಕಗಳಿಗೆ ಬರುವ ಗ್ರಾಹಕರನ್ನೇ ರೇಜಿಗಿಡುವಂತೆ ಮಾಡಲಾಗುತ್ತಿದೆ. ಸೀರೆ ಖರೀದಿಸುವ ಪಡಿಪಾಟಲಿನಿಂದ ಬೇಸತ್ತು ಗ್ರಾಹಕರು ಮೈಸೂರು ಸಿಲ್ಕ್ ನಿಂದ ವಿಮುಖರಾದರೆ ಆ ವೇಳೆ ಬೇಡಿಕೆ ಕೊರತೆಯ ನೆಪ ಹೇಳಿ ಇಡೀ ಉದ್ಯಮವನ್ನು ಅವನತಿಯತ್ತ ದೂಡುವ ಹುನ್ನಾರ ನಡೆದಿದೆ. ಒಂದು ಕಾಲದಲ್ಲಿ ರಾಜವೈಭೋಗದಲ್ಲಿದ್ದ ಪ್ರಿಯದರ್ಶಿನಿ ಮಾರಾಟ ಮಳಿಗೆಗಳಂತೆ ಮುಂದೊಂದು ದಿನ ಕೆಎಸ್‌‍ಐಸಿ ಮಳಿಗೆಗಳು ಕ್ಷೀಣವಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

RELATED ARTICLES

Latest News