Thursday, January 8, 2026
Homeರಾಜ್ಯ2 ಬಾರಿ ಶವಪರೀಕ್ಷೆ ಮಾಡಿದ್ದು ನಿಜ : ಗೃಹಸಚಿವ ಪರಮೇಶ್ವರ್‌ಗೆ ಹೆಚ್ಡಿಕೆ ತಿರುಗೇಟು

2 ಬಾರಿ ಶವಪರೀಕ್ಷೆ ಮಾಡಿದ್ದು ನಿಜ : ಗೃಹಸಚಿವ ಪರಮೇಶ್ವರ್‌ಗೆ ಹೆಚ್ಡಿಕೆ ತಿರುಗೇಟು

It is true that the autopsy was done twice: HDK hits back at Home Minister

ಬೆಂಗಳೂರು, ಜ.6-ಬಳ್ಳಾರಿಯಲ್ಲಿ ಕಗ್ಗೊಲೆಯಾದ ನಿಮ್ಮದೇ ಪಕ್ಷದ ನತದೃಷ್ಟ ಕಾರ್ಯಕರ್ತನ ಡಬಲ್ ಪೋಸ್ಟ್ ಮಾರ್ಟಂ ಕಥಾನಕದ ಬಗ್ಗೆ ನಾನು ಹೇಳಿದ್ದು ಸತ್ಯ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವ ಪರಮೇಶ್ವರ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸತ್ತ ಶರೀರವನ್ನೂ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುವ ನಿಮ್ಮ ಕೀಳು ನಡವಳಿಕೆ ಕುರಿತು ನಾನು ಹೇಳಿದ್ದು ಅಕ್ಷರಶಃ ನಿಜ ಎಂದು ಸಮರ್ಥಿಸಿಕೊಂಡಿದ್ದಾರೆ.

ಡಬಲ್ ಪೋಸ್ಟ್ ಮಾರ್ಟಂ ಅಸತ್ಯವಾದರೆ ಬಿಮ್ಸ್ ಅಧಿಕ್ಷಕರನ್ನು ತಕ್ಷಣವೇ ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಿ. ಆಗ ನಿಮ್ಮ ಪೋಸ್ಟ್ ಮಾರ್ಟಂ ಮಾಯಾಜಾಲ ಬಯಲಾಗುತ್ತದೆ. ಮಾಡಿಸುತ್ತೀರಾ ಮಂತ್ರಿಗಳೇ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಕರಣ ಮುಚ್ಚಿಹಾಕಲು ನಿಮ್ಮ ಸರ್ಕಾರ ನಡೆಸುತ್ತಿರುವ ಮಹಾನ್ ಹರಸಾಹಸ ಏನೇನು ಎಂಬುದು ನನಗೆ ಗೊತ್ತಿದೆ. ಹಾಗೆಯೇ, ಬಿಮ್ಸ್ ಅಧಿಕ್ಷಕರ ಹೇಳಿಕೆಯನ್ನೂ ಗಮನಿಸಿದ್ದೇನೆ. ಅವರ ಪ್ರಕಾರ 6 ಗಂಟೆಯಿಂದ ಶುರುವಾದ ಪೋಸ್ಟ್ ಮಾರ್ಟಂ 3 ಗಂಟೆಗಳ ಕಾಲ ನಡೆದು ವಿಳಂಬವಾಯಿತು. ದೇಹದಲ್ಲಿ ಅನೇಕ ಚೂರುಗಳು ಇದ್ದವು ಎಂದು ಹೇಳಿದ್ದಾರೆ. ಸರಿ. ಆದರೆ, ಆ ವೈದ್ಯರೇ ಮರಣೋತ್ತರ ಪರೀಕ್ಷೆಯನ್ನು ಮುಗಿಸಬಹುದಿತ್ತು. ಹಾಗಿದ್ದ ಮೇಲೆ ಇನ್ನೊಬ್ಬ ವೈದ್ಯರನ್ನು ಕರೆಸಿಕೊಂಡ ಗುಟ್ಟೇನು? ಮೃತದೇಹ ಪರೀಕ್ಷೆಗೆ ಎಷ್ಟು ವೈದ್ಯರು ಬೇಕು? ಮರಣೋತ್ತರ ಪರೀಕ್ಷೆ ವೇಳೆ ನೀವು ಜೀವ ಉಳಿಸಬೇಕಿತ್ತೆ? ಅಥವಾ ಸತ್ಯ ಹುಡುಕಬೇಕಿತ್ತೆ? ಆಗ ನೀವು ಕರೆಸಬೇಕಿದ್ದದ್ದು ಪೊರೆನ್ಸಿಕ್ ತಜ್ಞರನ್ನು ಎಂದು ಅವರು ಹೇಳಿದ್ದಾರೆ.

ಪೋಸ್ಟ್ ಮಾರ್ಟಂ ವೇಳೆ ಆ ಇಬ್ಬರು ವೈದ್ಯರ ನಡುವೆ ಏನೆಲ್ಲಾ ತಿಕ್ಕಾಟ ನಡೆಯಿತು? ಎನ್ನುವುದು ಕೂಡ ನನಗೆ ಗೊತ್ತಿದೆ. ಬಿಮ್ಸ್ ಅಧಿಕ್ಷಕರ ಹೇಳಿಕೆಯಲ್ಲೇ ನಿಮಗೆ ಪ್ರಶ್ನೆಯೂ ಅಡಗಿದೆ, ಉತ್ತರವೂ ಇದೆ. ಮೊದಲ ವೈದ್ಯರೇ ಮರಣೋತ್ತರ ಪರೀಕ್ಷೆ ಮುಗಿಸಬಹುದಿತ್ತು. ಇನ್ನೊಬ್ಬ ವೈದ್ಯರ ಅವಶ್ಯಕತೆ ಏನಿತ್ತು? ಎಂದು ಅವರು ಪ್ರಶ್ನಿಸಿದ್ದಾರೆ.

ಸಮಾಜವನ್ನು ಹಾಳು ಮಾಡಲಿಕ್ಕೊ ಅಥವಾ ನಿಮ್ಮ ತನಿಖೆ ದಿಕ್ಕು ತಪ್ಪಿಸಲಿಕ್ಕೊ, ಮಾಹಿತಿ ಇಲ್ಲದೆಯೋ ನಾನು ಹೇಳಿದ್ದಲ್ಲ. ಮೃತದೇಹವನ್ನೂ ನಿಮ್ಮ ಮನೆಹಾಳು ರಾಜಕೀಯಕ್ಕೆ ಬಳಸಿಕೊಂಡಿದ್ದನ್ನು ರಾಜ್ಯದ ಜನತೆಗೆ ಗಮನಕ್ಕೆ ತಂದಿದ್ದೇನೆ. ಪ್ರಶ್ನಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

RELATED ARTICLES

Latest News