ಬೆಳಗಾವಿ,ಡಿ.18- ಇತ್ತೀಚೆಗೆ ರಾಜ್ಯದ ವಿವಿಧ ಕಡೆ ಜೈಲುಗಳಲ್ಲಿ ಆರೋಪಿಗಳು ಹಾಗು ಅಪರಾಧಿಗಳು ಐಷರಾಮಿ ಜೀವನ ನಡೆಸುತ್ತಿರುವ ಕುರಿತು ಹೊರಬಂದ ವಿಡಿಯೋಗಳು ಹಿಂದಿನ ಸರ್ಕಾರದಲ್ಲಿ ನಡೆದ ಘಟನೆಗಳು ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿ ಸದಸ್ಯ ಕಿಶೋರ್‌ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರಾಗೃಹದಲ್ಲಿ ಎಣ್ಣೆ ಮಾರಾಟ, ನೃತ್ಯ, ಸ್ಯಾಟಲೈಟ್ ಫೋನ್ ಬಳಕೆ, ಮೊಬೈಲ್ ಬಳಕೆ, ಡ್ರಗ್ಸ್ ದಂಧೆ ಸೇರಿದಂತೆ ಇತ್ಯಾದಿ ವಿಷಯಗಳು ಹೊರಬಂದಿವೆ. ಈ ಎಲ್ಲ ಘಟನೆಗಳು ಇತ್ತೀಚೆಗೆ ನಡೆದಿಲ್ಲ. ಬದಲಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಘಟನೆಗಳಾಗಿವೆ ಎಂದು ತಿರುಗೇಟು ನೀಡಿದರು.
ನಾವು ಈ ಘಟನೆಗಳು ನಡೆದ ನಂತರ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೂಲಂಕುಷವಾಗಿ ಪರಿಶೀಲಿಸಿ, ವೈಜ್ಞಾನಿಕವಾಗಿಯೂ ತನಿಖೆ ನಡೆಸಿ ವರದಿ ನೀಡಿದ್ದಾರೆ. ಇದು ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಘಟನೆಗಳು. ನಾನು ಇದಕ್ಕೆ ಸದನದಲ್ಲಿ ಸಾಕ್ಷಿ ಒದಗಿಸುತ್ತೇನೆ ಎಂದು ಸವಾಲು ಹಾಕಿದರು.
ನಾವು ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಬಹಳ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದರಲ್ಲಿ ಶಾಮೀಲಾದ ಅಧಿಕಾರಿಗಳನ್ನು ಅಮಾನತುಪಡಿಸಿದ್ದೇವೆ. ಕೆಲವು ಕಡೆ ದಾಳಿಯನ್ನೂ ನಡೆಸಿದ್ದೇವೆ. ಸರ್ಕಾರ ಏನೂ ಮಾಡಿಯೇ ಇಲ್ಲ ಕಣ್ಣಮುಚ್ಚಿ ಕಟ್ಟಿ ಕೂತಿರೆ ಇಷ್ಟೆಲ್ಲಾ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ನಾವು ದಾಳಿ ಮಾಡಿದ ಸಂದರ್ಭದಲ್ಲಿ ಮೊಬೈಲ್, ಚಾಕುಗಳು ಸಿಕ್ಕಿವೆ. ತಪ್ಪಿತಸ್ಥರನ್ನು ಬಿಡುವುದಿಲ್ಲ. ಜೈಲಿನಲ್ಲಿ ಜಾಮರ್ ಹಾಕಿದರೆ ಅಪರಾಧಿಗಳು ಅದನ್ನೂ ಸಹ ಕೆಡಿಸಿ ಹಾಕುತ್ತಾರೆ. ಮಂಗಳೂರಿನಲ್ಲಿ ಜಾಮರ್ ಹಾಕಿದರೆ ಅಕ್ಕಪಕ್ಕದ ಮನೆಗಳಿಗೆ ನೆಟ್‌ವರ್ಕ್ ಸಿಗುವುದಿಲ್ಲ. ತಮ ಮನೆಗಳಿಗೆ ನೆಟ್‌ವರ್ಕ್ ಬರದಿದ್ದರೆ ಅವರು ದೂರುತ್ತಾರೆ. ಹಾಗಾದರೆ ನಾವು ಏನು ಮಾಡಬೇಕು ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು.
ಈ ವೇಳೆ ಸದಸ್ಯ ಕಿಶೋರ್‌ಕುಮಾರ್ ಸದನದಲ್ಲಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಆಗ ಪರಮೇಶ್ವರ್ ಅವರ ಹೆಸರನ್ನು ಏಕೆ ಪ್ರಸ್ತಾಪ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಆಗ ಎದ್ದು ನಿಂತ ಶಿವಕುಮಾರ್ ಅವರು, ನನ್ನ ಮನೆಗೆ ಯಾವ ದೂರವಾಣಿ ಕರೆಯೂ ಬಂದಿಲ್ಲ. ನನಗೆ ಯಾರೂ ಕರೆಯನ್ನೂ ಮಾಡಿಲ್ಲ. ನಾನು ಹಿಂದೆ ಬಂಧಿಖಾನೆ ಸಚಿವನಾಗಿದ್ದೆ. ಹಾಗಾಗಿ ನನಗೆ ಅಲ್ಲಿ ಏನೇನು ನಡೆಯುತ್ತದೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಈ ವೇಳೆ ಕಿಶೋರ್‌ಕುಮಾರ್ ಮಾತನಾಡಿ, ನನ್ನ ಹೇಳಿಕೆಯನ್ನೂ ತಪ್ಪಾಗಿ ಭಾವಿಸಿದ್ದೀರಿ. ನಿಮ ಮನೆಗೆ ಜೈಲಿನಿಂದ ದೂರವಾಣಿ ಕರೆ ಬಂದಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಡ್ರಗ್ಸ್ ಮುಕ್ತ ಕರ್ನಾಟಕ:
ಬಿಜೆಪಿಯ ಕೇಶವ ಪ್ರಸಾದ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಕರ್ನಾಟಕವನ್ನು ಡ್ರಗ್‌್ಸ ಮುಕ್ತ ಮಾಡಬೇಕೆಂಬ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ.
ಡ್ರಗ್‌್ಸ ದಂಧೆ ವಿರುದ್ಧ ಯುದ್ಧ ಘೋಷಣೆ ಮಾಡಿದ್ದೇವೆ. ಡ್ರಗ್‌್ಸ ಮುಕ್ತ ರಾಜ್ಯ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು.
2025ರಲ್ಲಿ 185 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದೇವೆ. ವಿದೇಶದ ವಿದ್ಯಾರ್ಥಿಗಳು ಡ್ರಗ್‌್ಸ ದಂಧೆಗೆ ಇಳಿದಿದ್ದಾರೆ. ಅವರನ್ನು ಹಿಡಿದಿದ್ದೇವೆ, 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಡಿಪೋರ್ಟ್ ಮಾಡಿದ್ದೇವೆ ಎಂದು ಹೇಳಿದರು. ಎಲ್ಲಾ ಶಾಲಾ ಕಾಲೇಜುಗಳಿಗೆ ಪ್ರತಿ ತಿಂಗಳು ಪೊಲೀಸರಿಗೆ ಭೇಟಿ ನೀಡಲು ಹೇಳಿದ್ದೇನೆ. ಆಂಟಿ ನಾರ್ಕೋಟಿಕ್‌್ಸ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಅವರಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದೇವೆ ಎಂದು ತಿಳಿಸಿದರು.
