Saturday, December 27, 2025
Homeಇದೀಗ ಬಂದ ಸುದ್ದಿಬಿಜೆಪಿಯೊಂದಿಗಿನ ಮೈತ್ರಿಗೊಂದಲ ನಿವಾರಣೆ ಹಿನ್ನೆಲೆಯಲ್ಲೇ ಸಮಾವೇಶಕ್ಕೆ ಜೆಡಿಎಸ್‌‍ ಸಿದ್ಧತೆ

ಬಿಜೆಪಿಯೊಂದಿಗಿನ ಮೈತ್ರಿಗೊಂದಲ ನಿವಾರಣೆ ಹಿನ್ನೆಲೆಯಲ್ಲೇ ಸಮಾವೇಶಕ್ಕೆ ಜೆಡಿಎಸ್‌‍ ಸಿದ್ಧತೆ

JDS prepares for rally

ಬೆಂಗಳೂರು, ಡಿ.27- ಬಿಜೆಪಿಯೊಂದಿಗಿನ ಮೈತ್ರಿ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಗೆ ಸೀಮಿತವಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿಗೆ ಇಲ್ಲ ಎಂದು ಹೇಳುವ ಮೂಲಕ ಜೆಡಿಎಸ್‌‍ ಮುಖಂಡರು ಹಾಗೂ ಕಾರ್ಯಕರ್ತರಲ್ಲಿದ್ದ ಗೊಂದಲವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ
ಪ್ರಧಾನಿ ಹೆಚ್‌.ಡಿ. ದೇವೇ ಗೌಡರು ನಿವಾರಿಸಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಿಬಿಎಯ ಐದು ನಗರ ಪಾಲಿಕೆಗಳ ಚುನಾವಣೆಯ ಸಿದ್ಧತೆಗೆ ಜೆಡಿಎಸ್‌‍ ಮುಖಂಡರು ಹಾಗೂ ಕಾರ್ಯಕರ್ತರು ಮೀನಾಮೇಷ ಎಣಿಸುತ್ತಿದ್ದರು. ಇದರ ಸುಳಿವರಿತ ಗೌಡರು ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ ಇದ್ದ ಗೊಂದಲಕ್ಕೆ ಸ್ಪಷ್ಟವಾದ ತೆರೆ ಎಳೆದಿದ್ದಾರೆ.

ಮೈತ್ರಿಯ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಬೆಂಗಳೂರು ಮಹಾನಗರದಲ್ಲಿ ಪಕ್ಷದ ಸಂಘಟನೆ, ಚುನಾವಣೆಗೆ ಅಭ್ಯರ್ಥಿಗಳ ಗುರುತಿಸುವಿಕೆಗೆ ಹಿನ್ನೆಡೆಯಾಗಿತ್ತು. ಬಿಜೆಪಿ-ಜೆಡಿಎಸ್‌‍ ನಡುವೆ ಚುನಾವಣಾ ಪೂರ್ವ ಮೈತ್ರಿಯಾದರೆ, ಯಾವ ವಾರ್ಡ್‌ ಯಾವ ಪಕ್ಷದವರಿಗೆ ಸಿಗುತ್ತದೋ ಎಂಬ ಅನುಮಾನ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿತ್ತು.

ಹೀಗಾಗಿ ಚುನಾವಣೆ ಸಿದ್ಧತೆ ಆರಂಭಿಸಲು ಜೆಡಿಎಸ್‌‍ ಕಾರ್ಯಕರ್ತರು ಹಿಂದು-ಮುಂದು ನೋಡುತ್ತಾ ಕಾಲ ಕಳೆಯುತ್ತಿದ್ದರು. ಪಕ್ಷದ ವರಿಷ್ಠ ಪದೇ ಪದೇ ಚುನಾವಣೆ ಸಿದ್ಧತೆ ಆರಂಭಿಸುವಂತೆ ನಿರ್ದೇಶನ ನೀಡಿದ್ದರೂ ಕಾರ್ಯಕರ್ತರು ಗೊಂದಲದಿಂದ ಹೊರಬಂದಿರಲಿಲ್ಲ.
ದೇವೇಗೌಡರು ಕಾರ್ಯಕರ್ತರಲ್ಲಿದ್ದ ಗೊಂದಲ ನಿವಾರಿಸಿರುವುದಲ್ಲದೆ, ಜ.18ರಂದು ಪಕ್ಷದ ಸಮಾವೇಶ ನಡೆಸಲು ಸೂಚನೆ ನೀಡಿದ್ದಾರೆ. ಇದರಿಂದ ಜೆಡಿಎಸ್‌‍ ಮುಖಂಡರು ಹಾಗೂ ಕಾರ್ಯಕರ್ತರು ಹೊಸ ಹುಮಸ್ಸಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಲು ತಮ ತಮ ವಾರ್ಡ್‌ಗಳನ್ನು ಗುರುತಿಸಿಕೊಂಡು ವರಿಷ್ಠರ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾಗದಿದ್ದರೂ ಈಗಿನಿಂದಲೇ ತಯಾರಿ ಆರಂಭಿಸಲು ವರಿಷ್ಠರು ಸ್ಪಷ್ಟ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬರುವ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌‍ ಮತ್ತು ಬಿಜೆಪಿ ಪಕ್ಷಗಳೆರಡು ಸ್ಪರ್ಧಿಸಲಿವೆ. ಎರಡೂ ಪಕ್ಷಗಳು ತಮ ತಮ ಅಭ್ಯರ್ಥಿಗಳ ಗೆಲುವಿಗೆ ಪ್ರತ್ಯೇಕವಾಗಿ ಶ್ರಮಿಸಲಿವೆ. ಎರಡೂ ಪಕ್ಷಗಳ ನಡುವೆ ಮೈತ್ರಿ ಇದ್ದರೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಇಲ್ಲ. ಒಂದು ರೀತಿಯಲ್ಲಿ ಸ್ನೇಹಮಯ ಸ್ಪರ್ಧೆ ನಡೆಸುವಂತಾಗಲಿದೆ.

RELATED ARTICLES

Latest News