Friday, December 12, 2025
Homeರಾಜ್ಯರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ

ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ

Kannada nameplates are mandatory in the state

ಬೆಳಗಾವಿ,ಡಿ.12- ವಾಣಿಜ್ಯ , ಕೈಗಾರಿಕೆ, ಟ್ರಸ್ಟ್‌, ಆಸ್ಪತ್ರೆ, ಮನರಂಜನಾ ಕೇಂದ್ರ, ಹೋಟೆಲ್‌ ಸೇರಿದಂತೆ ಮತ್ತಿತರ ಕಡೆ ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸುವ ನಿಯಮವನ್ನು 15 ದಿನಗಳಿಂದ 1 ತಿಂಗಳೊಳಗೆ ರಾಜ್ಯಾದ್ಯಂತ ಕಡ್ಡಾಯ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ವಿಧಾನಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕನ್ನಡ ಕಡ್ಡಾಯ ನಾಮಫಲಕ ಅನುಷ್ಠಾನ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ರೀತಿ ನಿಯಮಗಳನ್ನು ರೂಪಿಸಿ ಕಳುಹಿಸಿಕೊಟ್ಟಿದ್ದೇವೆ. 15 ದಿನಗಳಿಂದ ಒಂದು ತಿಂಗಳೊಳಗೆ ಇದು ಪೂರ್ಣಗೊಳ್ಳಬಹುದು. ನಂತರ ರಾಜ್ಯಾದ್ಯಂತ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.

ಕನ್ನಡ ಕಡ್ಡಾಯ ನಾಮಫಲಕ ಅಭಿಯಾನವು ಅನೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. 11 ಜಿಲ್ಲೆಗಳಲ್ಲಿ ನೂರಕ್ಕೆ ನೂರರಷ್ಟು ಅನುಷ್ಠಾನವಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ, ಶೇ. 80, 85, 90ರಷ್ಟು ಅನುಷ್ಠಾನವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಡ್ಡಾಯ ಮಾಡಲು ಈ ನಿಯಮವನ್ನು ಜಾರಿ ಮಾಡುತ್ತೇವೆ ಎಂದರು.

ನಮ ರಾಜ್ಯದಲ್ಲಿ ಕನ್ನಡ ಕಡ್ಡಾಯ ಆಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿಯೇ ರಾಜ್ಯಮಟ್ಟದ ಸಮಿತಿಯನ್ನು ರಚಿಸಿದ್ದೇವೆ. ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇರುತ್ತಾರೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಕನ್ನಡವನ್ನು ಕಡ್ಡಾಯಗೊಳಿಸಬೇಕೆಂಬ ಸರ್ಕಾರದ ನಿಲುವಿನಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

31 ಜಿಲ್ಲೆಗಳಲ್ಲಿ ವಿಚಕ್ಷಣ ದಳ : ಬೆಂಗಳೂರಿನಲ್ಲಿ 8 ವಲಯಗಳನ್ನು ಸ್ಥಾಪನೆ ಮಾಡಿದ್ದೇವೆ. ಇದಕ್ಕಾಗಿ ವಿಚಕ್ಷಣ ದಳವನ್ನು ಸಹ ಸ್ಥಾಪನೆ ಮಾಡಲಿದ್ದೇವೆ. ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಖರೀದಿ ಮಾಡಲಿದ್ದೇವೆ. ಈಗಾಗಲೇ ಕಚೇರಿ ಕೂಡ ಆರಂಭವಾಗಿದೆ. ಸಮಿತಿ ಕೆಲವು ಕಾರಣಗಳಿಂದ ವಿಳಂಬವಾಗಿದೆ ಎಂಬುದನ್ನು ಒಪ್ಪಿಕೊಂಡರು.

ಕನ್ನಡ ನಾಮಫಲಕ ಹಾಕದೇ ಇದ್ದರೆ, ಮೊದಲ ಅಪರಾಧಕ್ಕಾಗಿ 5 ಸಾವಿರ ದಂಡ ಹಾಕುತ್ತೇವೆ. ಎರಡನೇ ಅಪರಾಧಕ್ಕೆ 10 ಸಾವಿರ ಹಾಗೂ ಪ್ರತಿ ಅಪರಾಧಕ್ಕೆ 20 ಸಾವಿರ ವಿಸ್ತರಿಸಬಹುದಾಗಿದೆ. 60:40 ಅನುಪಾತದಲ್ಲಿ ಕನ್ನಡ ಬೋರ್ಡ್‌ ಹಾಕಬೇಕು. ಜಿಲ್ಲಾಧಿಕಾರಿಗಳಿಗೆ ಸೂಚನೆ ಸಹ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

RELATED ARTICLES

Latest News