ಬೆಂಗಳೂರು,ಡಿ.13- ಸಿಎಂ ಕುರ್ಚಿ ಕದನ ದೆಹಲಿಗೆ ಸ್ಥಳಾಂತರಗೊಳ್ಳಲಿದೆ. ಶತಾಯಗತಾಯ ಸಿಎಂ ಪಟ್ಟ ಪಡೆಯಲೇಬೇಕೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ನಿರಂತರ ಕಸರತ್ತು ನಡೆಸುತ್ತಿದ್ದರೆ, ಪಟ್ಟದ ಮುಂದುವರಿಕೆಗೆ ಸಿಎಂ ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆದ ರಾಜಕೀಯ ಮೇಲಾಟಗಳು ಈಗ ಮತ್ತೆ ದೆಹಲಿಗೆ ತಲುಪಿವೆ.
ಸಿಎಂ ಕುರ್ಚಿ ಕದನ ದಿನೇದಿನೇ ತಾರಕಕ್ಕೇರುತ್ತಲೇ ಇದೆ. ಹೈಕಮಾಂಡ್ ಸೂಚನೆಯಂತೆ ಉಪಾಹಾರ ಕೂಟದ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ನಾಯಕತ್ವ ಬದಲಾವಣೆ ವಿಷಯವನ್ನು ತಣ್ಣಗಾಗಿಸುವಂತೆ ಮಾಡಿದ ಪ್ರಯತ್ನ ಫಲ ಕೊಟ್ಟಂತೆ ಕಾಣುತ್ತಿಲ್ಲ.
ಸಿಎಂ, ಡಿಸಿಎಂ ಬೆಂಬಲಿಗರು ತಮ ನಾಯಕರುಗಳ ಪರವಾಗಿ ಧ್ವನಿ ಎತ್ತುತ್ತಲೇ ಇದ್ದಾರೆ. ಎಐಸಿಸಿ ಅಧ್ಯಕ್ಷರಾದ ಖರ್ಗೆಯವರು ಬೆಂಗಳೂರಿಗೆ ಬಂದು ಈ ಕುರಿತು ಪರಿಸ್ಥಿತಿ ಅವಲೋಕಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು.
ಸಿಎಂ, ಡಿಸಿಎಂ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂಬ ಹೇಳಿಕೆ ನೀಡಿದ್ದರು. ಆದರೆ ಅವರ ಆಪ್ತ ಬೆಂಬಲಿಗರು ಯಾಕೋ ಈ ವಿಷಯದಲ್ಲಿ ತಣ್ಣಗಾಗುತ್ತಿಲ್ಲ. ಬೆಂಗಳೂರಿನ ಉಪಾಹಾರ ಕೂಟಗಳು ಮುಗಿದ ಮೇಲೆ ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ನಡೆದ ಔತಣಕೂಟದಲ್ಲಿ ಮತ್ತೆ ನಾಯಕತ್ವದ ವಿಷಯಗಳು ಗರಿಗೆದರಿ ಪರಸ್ಪರ ಶಕ್ತಿ ಪ್ರದರ್ಶನಕ್ಕೆ ಕಾರಣವಾಗಿವೆ.
ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಸಭೆ ನಡೆಸಿದರೆ ಡಿಕೆಶಿ ಶಿವಕುಮಾರ್‌ರವರ ಬೆಂಬಲಿಗರಾದ 40ಕ್ಕೂ ಹೆಚ್ಚು ಶಾಸಕರು ಔತಣಕೂಟದ ನೆಪದಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಸಿಎಂ ಕುರ್ಚಿ ಕದನ ಕಾವೇರಿದೆ. ನಾಳೆ ದೆಹಲಿಯಲ್ಲಿ ಎಐಸಿಸಿ ವತಿಯಿಂದ ವೋಟ್‌ಚೋರಿ ಆಂದೋಲನ ನಡೆಯುತ್ತಿದ್ದು, ಅಲ್ಲೂ ಕೂಡ ಶಕ್ತಿ ಪ್ರದರ್ಶನ ನಡೆಸಲು ಬೆಂಬಲಿಗರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 100 ಕ್ಕೂ ಹೆಚ್ಚು ಶಾಸಕರು, ವಿಧಾನಪರಿಷತ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ನಾಯಕತ್ವದ ಸ್ಪಷ್ಟನೆಗೆ ಒತ್ತಾಯಿಸಲಿದ್ದಾರೆ.ಡಿ.ಕೆ.ಶಿವಕುಮಾರ್ ಬೆಂಬಲಿಗರು ಕೂಡ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದು ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲು ಮುಂದಾಗಿದ್ದಾರೆ.
ನಾಳೆ ಸಿಎಂ, ಡಿಸಿಎಂ ದೆಹಲಿಗೆ ತೆರಳುತ್ತಿದ್ದು, ವೋಟ್‌ಚೋರಿ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ನೀಡಿದ ಹೇಳಿಕೆ ಹಾಗೂ ಅವರ ಬೆಂಬಲಿಗರ ಹೇಳಿಕೆ, ಡಿಕೆಶಿ ಬೆಂಬಲಿಗರು ನಡೆಸಿದ ಔತಣಕೂಟ ಸಂಬಂಧ ಹೈಕಮಾಂಡ್ ನಾಯಕರಿಗೆ ಪರಸ್ಪರ ದೂರು-ಪ್ರತಿದೂರುಗಳು ಸಲ್ಲಿಕೆಯಾಗಲಿವೆ ಎಂದು ತಿಳಿದುಬಂದಿದೆ.
ರಾಜ್ಯ ನಾಯಕತ್ವದ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೀಯ ಮಂಡಳಿಯ ನಾಯಕಿ ಸೋನಿಯಾಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೆವಾಲ್ ಅವರು ನಡೆಸಿದ ಒಂದು ಸುತ್ತಿನ ಮಾತುಕತೆ ಅಪೂರ್ಣಗೊಂಡಿತ್ತು. ಈಗ ಮತ್ತೆ ಕುರ್ಚಿ ಕದನ ಜೋರಾಗಿದ್ದು, ನಾಯಕರು ಈಗ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕು.
ಒಟ್ಟಾರೆ ಕಾಂಗ್ರೆಸ್‌ನ ಸಿಎಂ ಕುರ್ಚಿ ಸಮರ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಬೆಳಗಾವಿ ಅಧಿವೇಶನ ಹಾಗೂ ಸಂಸತ್ ಅಧಿವೇಶನದ ನಂತರ ಏನಾಗುತ್ತದೋ ಕಾದು ನೋಡಬೇಕು.
