ಚಿಕ್ಕಮಗಳೂರು,ಜ.11- ಚಾರ್ಮಾಡಿಘಾಟ್‌ನಲ್ಲಿ ರಸ್ತೆ ಬಿಟ್ಟು ಕದಲದ ಕಾಡಾನೆ ಇಂದು ಕೂಡ ನಿಂತಲ್ಲೇ ನಿಂತು ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆ ನೀಡಿದೆ. ಚಾರ್ಮಾಡಿ ಘಾಟಿಯ 2ನೇ ಹಾಗೂ 3ನೇ ತಿರುವಿನ ನಡುವಿನ ರಸ್ತೆಯಲ್ಲಿ ಶನಿವಾರ ಕಾಣಿಸಿಕೊಂಡ ಕಾಡಾನೆ, ಇಂದು ಸಹ ರಸ್ತೆ ಮಧ್ಯದಲ್ಲೇ ನಿಂತಿದ್ದರಿಂದ ವಾಹನ ಸವಾರರು ತೀವ್ರ ಪರದಾಟ ಅನುಭವಿಸಿದರು.
ರಾತ್ರಿ ರಸ್ತೆಬದಿಯ ಮರವನ್ನು ಮುರಿದು ಹಾಕಿದ ಕಾಡಾನೆ, ನಡುರಸ್ತೆಯಲ್ಲೇ ನಿಂತು ಆಹಾರ ಸೇವನೆ ಮಾಡುತ್ತಿದ್ದುದರಿಂದ ಎರಡೂ ದಿಕ್ಕಿನಲ್ಲೂ ವಾಹನಗಳು ಸಾಲುಗಟ್ಟಿ ನಿಂತ್ತಿದ್ದವು. ಕಾಡಾನೆಯನ್ನು ಅಟ್ಟಲು ಕೆಲ ವಾಹನ ಸವಾರರು ಪ್ರಯತ್ನಿಸಿದರೂ ಅದು ಸ್ಥಳದಿಂದ ಕದಲದೆ ನಿಂತ ಕಾರಣ, ಒಂದು ತಾಸಿಗೂ ಹೆಚ್ಚು ಕಾಲ ಭಾರೀ ದಟ್ಟಣೆ ಉಂಟಾಯಿತು.
ಕಾಡಾನೆ ಕಂಡುಬಂದ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸೌಲಭ್ಯ ಇಲ್ಲದ ಕಾರಣ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಇನ್ನೂ ಆತಂಕಕಾರಿ ವಿಷಯವೆಂದರೆ, ರಾತ್ರಿ ಕಾಣಿಸಿಕೊಂಡಿದ್ದ ಅದೇ ಕಾಡಾನೆ ಇಂದು ಬೆಳಗ್ಗೆಯಾದರೂ ಅದೇ ಸ್ಥಳದಲ್ಲಿ ರಸ್ತೆ ಮಧ್ಯದಲ್ಲೇ ಇದ್ದು, ಹಗಲು ವೇಳೆಯಲ್ಲೂ ವಾಹನ ಸಂಚಾರಕ್ಕೆ ಅಡ್ಡಿಯಾಯಿತು
ಈ ವೇಳೆ ಕೆಲವು ಪ್ರಯಾಣಿಕರು ವಾಹನ ನಿಲ್ಲಿಸಿ ಕಾಡಾನೆಯ ಸೆಲ್ಫಿ, ಫೋಟೋ ಹಾಗೂ ವಿಡಿಯೋಗಳನ್ನು ತೆಗೆಯಲು ಮುಂದಾದರು.ಚಾರ್ಮಾಡಿ ಘಾಟಿಯಲ್ಲಿ ಕಾಡಾನೆಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
