ಬೆಂಗಳೂರು,ಜ.6- ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆನ್‌ಲೈನ್ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಇನ್ನು ಮುಂದೆ ಬೆಂಗಳೂರು-ಒನ್ ಹಾಗೂ ಕರ್ನಾಟಕ-ಒನ್ ಕೇಂದ್ರಗಳಲ್ಲಿ ಕಲ್ಪಿಸಿದೆ.
ಕೆಎಸ್‌ಆರ್‌ಟಿಸಿ ವೆಬ್‌ಸೈಟ್, ಮೊಬೈಲ್ ಆಪ್, ಇಲಾಖಾ ಕೌಂಟರ್‌ಗಳು ಹಾಗೂ ಫ್ರಾಂಚೈಸಿ ಕೌಂಟರ್‌ಗಳ ಜೊತೆಗೆ, ಪ್ರಯಾಣಿಕರು ಈಗ ತಮ ಮನೆಗೆ ಸಮೀಪದಲ್ಲಿರುವ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಮುಂಗಡ ಬಸ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ ನಿರ್ದೇಶನಾಲಯ(ಇಡಿಸಿಎಸ್)ರವರ ಬೆಂಗಳೂರು-ಒನ್ ಹಾಗೂ ಕರ್ನಾಟಕ-ಒನ್ ಕೇಂದ್ರಗಳಲ್ಲಿ ಕಾರ್ಯಗತಗೊಳಿಸಲಾಗಿದೆ.
ಈ ಸೇವೆ ಬೆಂಗಳೂರು ನಗರದಲ್ಲಿರುವ 161 ಬೆಂಗಳೂರು-ಒನ್ ಕೇಂದ್ರಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ 1021 ಕರ್ನಾಟಕ-ಒನ್ ಕೇಂದ್ರಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ಈ ಸುಲಭ ಮತ್ತು ಹತ್ತಿರದ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.
ಟಿಕೆಟ್ ಕಾಯ್ದಿರಿಸುವಿಕೆ ಅಥವಾ ಯಾವುದೇ ಸಹಾಯಕ್ಕಾಗಿ, ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕರೆ ಕೇಂದ್ರವನ್ನು 080-26252625 (24×7) ಅಥವಾ ಅವತಾರ್ ಸೆಲ್ ಅನ್ನು 7760990034 / 7760990035 (ಬೆಳಿಗ್ಗೆ 7 ರಿಂದ ರಾತ್ರಿ 10 ಗಂಟೆವರೆಗೆ) ಅಥವಾ ಬೆಂಗಳೂರು-ಒನ್ ಕರೆ ಕೇಂದ್ರವನ್ನು 080-49203888 ಸಂಪರ್ಕಿಸಬಹುದು.
