ಬೆಂಗಳೂರು,ಜ.23-ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ಒರಿಜಿನಲ್ ವಿನಾಯಕ ಮೈಲಾರಿ-1938 ಹೋಟೆಲ್‌ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.ಇಂದಿರಾನಗರದ 80 ಅಡಿ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಹೋಟೆಲ್ ಉದ್ಘಾಟಿಸಿದ ಬಳಿಕ, ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ಕುಳಿತು ಪ್ರಸಿದ್ಧ ಬೆಣ್ಣೆ ಖಾಲಿ ದೋಸೆ ಮತ್ತು ಕಾಶಿ ಹಲ್ವಾವನ್ನು ಸವಿದರು.
ದೋಸೆಯ ರುಚಿಗೆ ತಲೆದೂಗಿದ ಅವರು, ನಾನು ಮೈಸೂರಿನಲ್ಲಿ ಅನೇಕ ಬಾರಿ ಈ ದೋಸೆ ಸವಿದಿದ್ದೇನೆ. ಈಗ ಬೆಂಗಳೂರಿನಲ್ಲೂ ಅದೇ ಅಪ್ಪಟ ರುಚಿ ಸಿಗುತ್ತಿದೆ. ಆಹಾರ ಪ್ರಿಯರು ಇನ್ನುಮುಂದೆ ಮೈಲಾರಿ ದೋಸೆಗಾಗಿ ಮೈಸೂರಿಗೆ ಹೋಗುವ ಅಗತ್ಯವಿಲ್ಲ, ಅದು ಈಗ ನಮ ಇಂದಿರಾನಗರದಲ್ಲೇ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣ್ಯಾತಿಗಣ್ಯರ ಸಾಕ್ಷಿ :
ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಜಿ.ಟಿ.ದೇವೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವರು ಉಪಸ್ಥಿತರಿದ್ದರು.
ನಾಲ್ಕನೇ ತಲೆಮಾರಿನ ಸಾರಥ್ಯ:
1938ರಲ್ಲಿ ಗೌರಮನವರು ಮೈಸೂರಿನ ನಜರ್‌ಬಾದ್‌ನಲ್ಲಿ ಆರಂಭಿಸಿದ್ದ ಈ ರುಚಿಯ ಪರಂಪರೆಯನ್ನು, ಇದೀಗ ನಾಲ್ಕನೇ ತಲೆಮಾರಿನ ಸಚಿನ್ ಮತ್ತು ಸಿಂಧು ದಂಪತಿ ಬೆಂಗಳೂರಿಗೆ ವಿಸ್ತರಿಸಿದ್ದಾರೆ. ಬಾಳೆ ಎಲೆ ಊಟ ಮತ್ತು ಹಳ್ಳಿ ಸೊಗಡಿನ ದೇಸಿ ರುಚಿಯನ್ನು ಉಳಿಸಿಕೊಂಡು ಹೋಗುವುದು ತಮ ಗುರಿ ಎಂದು ಹೋಟೆಲ್ ಮಾಲೀಕರು ತಿಳಿಸಿದರು.ಡಾ. ರಾಜ್‌ಕುಮಾರ್‌ರಿಂದ ಹಿಡಿದು ಸಚಿನ್ ತೆಂಡೂಲ್ಕರ್‌ವರೆಗೆ ಮತ್ತು ಬಿಬಿಸಿ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದ ಈ ಹೋಟೆಲ್ ಇಂದಿನಿಂದ ಅಧಿಕೃತವಾಗಿ ಬೆಂಗಳೂರಿಗರ ಸೇವೆಗೆ ಲಭ್ಯವಾಗಿದೆ.
