ಬೆಂಗಳೂರು,ಡಿ.16- ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಅವರ ಒಡೆತನದ ವಾಣಿಜ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ಬೆಲೆ ಬಾಳುವ ಅಕ್ರಮ ಸಂಪತ್ತನ್ನು ಬಯಲಿಗೆಳೆದಿದ್ದಾರೆ.
ಏಕಕಾಲದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಕೊರೆವ ಚಳಿಯ ನಡುವೆ ಅಧಿಕಾರಿಗಳ ಮನೆಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಶಿವಮೊಗ್ಗ, ಮಂಡ್ಯ, ಧಾರವಾಡ, ವಿಜಯನಗರ ಜಿಲ್ಲೆಗಳೂ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಮಂಡ್ಯ ತಾಲ್ಲೂಕು ಪಂಚಾಯಿತಿ ಆಡಳಿತಾಧಿ ಕಾರಿ ಭೈರೇಶ್ ಅವರ ಮಂಡ್ಯದಲ್ಲಿರುವ ನಿವಾಸ, ಮದ್ದೂರಿನಲ್ಲಿರುವ ಅತ್ತೆ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ನಗದು, ಹಲವೆಡೆ ಕೃಷಿ ಜಮೀನು,
ನಿವೇಶನಗಳು ಸೇರಿದಂತೆ ಹಲವು ಚರಾಸ್ತಿಗಳ ದಾಖಲೆಗಳು ದೊರೆತಿದ್ದು, ಇದನ್ನು ಲೆಕ್ಕ ಹಾಕಲಾಗುತ್ತಿದೆ.
ಶಿವಮೊಗ್ಗದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ರುಪಿಲಾ ನಾಯಕ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಈ ವೇಳೆ ಬೆಲೆಬಾಳುವ ನಿವೇಶನಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ ಹಲವೆಡೆ ಕೃಷಿ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ಶಿವಮೊಗ್ಗದ ಬಸವನಗುಡಿ ಮನೆ, ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರ ಮನೆಯ ಮೇಲೂ ದಾಳಿ ನಡೆದಿದೆ.
ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಕಚೇರಿಯಲ್ಲಿ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯಪುರದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಲ್.ಆರ್.ಶಂಕರ್‌ನಾಯಕ್ ಅವರು ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆ ಕಚೇರಿ, ಹೊಸಪೇಟೆಯಲ್ಲಿರುವ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆದಿದೆ.ಬೆಲೆಬಾಳುವ ವಸ್ತುಗಳು, ನಗದು, ಚಿನ್ನಾಭರಣಗಳು ಸೇರಿದಂತೆ ಹಲವು ಕಡೆ ಮನೆ ಹಾಗೂ ಅಕ್ರಮ ನಿವೇಶನಗಳು ಪತ್ತೆಯಾಗಿವೆ.
ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಅಮರೇಶ್, ರಾಜೇಶ್ ಲಮಾಣಿ ಮತ್ತು ಕೊಪ್ಪಳ, ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.ಧಾರವಾಡದ ಕಾರ್ಯದರ್ಶಿ ವಿಭಾಗದ ಜಾಗೃತದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್ ಅವರಿಗೂ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಜ್ಞಾನನಗರಿಯಲ್ಲಿರುವ ನಿವಾಸ, ಕಚೇರಿ ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಇಲ್ಲೂ ಕೂಡ ಅಕ್ರಮ ಸಂಪತ್ತು ಬೆಳಕಿಗೆ ಬಂದಿದೆ.
ಅಕ್ರಮ ಆಸ್ತಿ ಬಗ್ಗೆ ಅಂದಾಜು ಲೆಕ್ಕ ಹಾಕಲಾಗುತ್ತಿದೆ. ಖಚಿತ ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ತಯಾರಿ ನಡೆಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
