ಬೆಂಗಳೂರು,ಜ.10- ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಿಯನ್ನು ಕಲಿಯಬೇಕು ಎಂಬ ವಿಧೇಯಕವನ್ನು ಕಡ್ಡಾಯಗೊಳಿಸದಂತೆ ಕೇರಳದ ಕಾಂಗ್ರೆಸ್ ನಾಯಕರಿಗೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವೊಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.
ಸೋಮನಾಥ ದೇವಾಲಯಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸರಗೋಡು ಸೇರಿದಂತೆ ಕೇರಳಕ್ಕೆ ಹೊಂದಿಕೊಂಡಿರುವ ಗಡಿಭಾಗಗಳಲ್ಲಿ ಕನ್ನಡಿಗರು ತಮ ಮಾತೃಭಾಷೆಯಲ್ಲಿ ಕಲಿಕೆ ಮಾಡುತ್ತಿದ್ದಾರೆ. ಏಕಾಏಕಿ ಮಲಯಾಳಿ ಕಲಿಯಿರಿ ಎಂದರೆ ಅವರು ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ಸಿ.ಎಂಗೆ ಕೇವಲ ಪತ್ರ ಬರೆದರೆ ಸಾಲದು. ತಕ್ಷಣವೇ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಒತ್ತಡ ಹಾಕಿ ಸರ್ಕಾರ ಈ ವಿಧೇಯಕಕ್ಕೆ , ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ಸಮಸ್ಯೆ ಇತ್ಯಾರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು
ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅಕ್ರಮವಾಗಿ ನಿರಾಶ್ರಿತರು ಮನೆಗಳನ್ನು ನಿರ್ಮಿಸಿಕೊಂಡಾಗ ತೆರವುಗೊಳಿಸಲಾಗಿತ್ತು. ಆಗ ಸಂಬಂಧಪಡದ ವಿಷಯದಲ್ಲಿ ಕೇರಳದ ಮುಖ್ಯಮಂತ್ರಿ ಹಾಗೂ ವೇಣುಗೋಪಾಲ್ ಮಧ್ಯಪ್ರವೇಶ ಮಾಡಿದರು. ಈಗ ಕನ್ನಡಿಗರ ಅಸಿತಿಗೆ ಧಕ್ಕೆಯಾಗುತ್ತಿದೆ. ಹಾಗಾದರೆ, ಕಾಂಗ್ರೆಸ್ ನಾಯಕ ವೇಣುಗೋಪಾಲ್ ಎಲ್ಲಿದ್ದಾರೆ? ಎಂದು ಪ್ರಶ್ನೆ ಮಾಡಿದರು.
ವೇಣುಗೋಪಾಲ್ ಅವರ ಒಂದೇ ಒಂದು ಟ್ವೀಟ್‌ಗೆ ಇಲ್ಲಿನ ಸರ್ಕಾರವೇ ನಡುಗಿ ಹೋಯಿತು. ಏಕೆಂದರೆ ಅವರ ಅಬ್ಬರ ಅಷ್ಟು ಜೋರಾಗಿತ್ತು. ಕಾಂಗ್ರೆಸ್ ನಾಯಕರು ಮನೆಗಳನ್ನು ಎದ್ದೋ ಬಿದ್ದವರಂತೆ ವಲಸಿಗರಿಗೆ ಮನೆ ನಿರ್ಮಿಸಿ ಕೊಡಲು ಮುಂದಾದರು. ಈಗ ಅವರ ಸದ್ದೇ ಇಲ್ಲ ಎಂದು ವ್ಯಂಗ್ಯವಾಡಿದರು.
ಕೇರಳದಲ್ಲಿ ಕನ್ನಡದ ಶಾಲೆಗಳನ್ನು ಉಳಿಸಿ ಎಂದು ನಮ ಸಿಎಂ ಅಲ್ಲಿನ ಸಿಎಂಗೆ ಪತ್ರ ಬರೆದರೆ ಪ್ರಯೋಜನವಿಲ್ಲ. ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕದಂತೆ ತಡೆಗಟ್ಟುವ ಕೆಲಸವನ್ನು ಮಾಡಬೇಕು. ಇದರ ಹೊಣೆಗಾರಿಕೆ ಸಿಎಂಗೆ ಇದೆ. ಕೇರಳದ ಕಮ್ಯುನಿಸ್ಟ್ ಸರ್ಕಾರ ಕನ್ನಡ ಶಾಲೆಗಳಲ್ಲಿ ಒತ್ತಾಯಪೂರ್ವಕವಾಗಿ ಮಲಯಾಳಿ ಭಾಷೆ ಹೇರಲು ಹೊರಟಿರುವುದು ಅತ್ಯಂತ ಖಂಡನೀಯ. ವಿಧಾನಸಭಾ ಚುನಾವಣಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದುರುದ್ದೇಶಪೂರ್ವಕವಾಗಿ ಭಾಷಾ ವಿವಾದವನ್ನು ಕೆಣಕಿ ಎರಡು ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕದ ಪ್ರತಿಯೊಂದು ವಿಷಯದಲ್ಲೂ ಪದೇ ಪದೇ ಮೂಗು ತೂರಿಸುವ ಕೆಲಸವನ್ನು ವೇಣುಗೋಪಾಲ್ ಮಾಡುತ್ತಾರೆ. ಇಲ್ಲಿನ ಕಾಂಗ್ರೆಸ್ ಸರ್ಕಾರ ಅನೇಕ ಬಾರಿ ಕೇರಳಕ್ಕೆ ಸಹಾಯ ಹಸ್ತ ನೀಡಿದೆ. ಈಗ ಮೌನವಾಗಿರುವುದು ಏಕೆ? ಎಂದು ಪ್ರಶ್ನೆ ಮಾಡಿದರು.
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದ ರಾಜ್ಯಪಾಲರ ನಡೆಯನ್ನು ಸಮರ್ಥನೆ ಮಾಡಿಕೊಂಡ ವಿಜಯೇಂದ್ರ, ರಾಜ್ಯ ಸರ್ಕಾರ ಮಸೂದೆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಹಿಂಬಾಗಿಲ ಮೂಲಕ ಮಸೂದೆ ಅಂಗೀಕಾರ ಮಾಡಿಕೊಂಡಿತ್ತು. ಈ ಮಸೂದೆ ಬಗ್ಗೆ ಸಾಕಷ್ಟು ಆಕ್ಷೇಪ ಇದೆ. ಬಿಜೆಪಿ ಅಷ್ಟೇ ಅಲ್ಲ ಜೆಡಿಎಸ್, ವಿವಿಧ ಸಂಘಟನೆಗಳು ಮಸೂದೆಗೆ ವಿರೋಧ ಮಾಡಿವೆ ಎಂದು ಹೇಳಿದರು.
ಈ ಮಸೂದೆ ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲು ಸರ್ಕಾರ ಹೊರಟಿದೆ. ರಾಜ್ಯದ ಪ್ರತಿಯೊಬ್ಬರೂ ಮಸೂದೆಗೆ ವಿರೋಧ ಮಾಡುತ್ತಿದ್ದಾರೆ.
ಈ ಕಾರಣಕ್ಕೆ ರಾಜ್ಯಪಾಲರು ಇದನ್ನು ತಡೆ ಹಿಡಿಯುವ ಕೆಲಸ ಮಾಡಿರಬಹುದು. ನಾವೂ ಕೂಡಾ ಅಂಕಿತ ಹಾಕದಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸೋಮನಾಥ ದೇವಾಲಯ ಭಾರತೀಯರ ಹೆಮೆ ಮತ್ತು ನಮ ಸಂಸ್ಕೃತಿಯ ಪ್ರತೀಕವಾಗಿದೆ. ದೇಶದ ಎಲ್ಲಾ ಕಡೆ ಇಂದು ಪೂಜೆ, ಪುನಸ್ಕಾರ ನಡೆಸುತ್ತಿದ್ದಾರೆ. ನಾವು ಕೂಡ ವಿಶೇಷ ಪೂಜೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಪಂಡಿತ್ ಜವಾಹರಲಾಲ್ ನೆಹರುಗೆ ತಿಳಿಸಿದ್ದರು. ಆದರೆ, ಇದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಆಗ ಕೆಲವು ಹಿರಿಯ ನಾಯಕರು ಸೋಮನಾಥ ದೇವಾಲಯದ ಪುನರ್ ನಿರ್ಮಾಣಕ್ಕೆ ನೆಹರು ಅವರನ್ನು ಒಪ್ಪಿಸಲು ಮುಂದಾದರು.
ಆದರೂ, ನೆಹರು ತಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಅವರ ಒಪ್ಪಿಗೆ ವಿರುದ್ಧವಾಗಿ ದೇವಾಲಯವನ್ನು ಪುನರ್ ಸ್ಥಾಪನೆ ಮಾಡಲಾಯಿತು. ಇಂದು 140 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿಕೊಟ್ಟು ಪೂಜೆ ಪುನಸ್ಕಾರ ಮಾಡುತ್ತಾರೆ. ಇದು ಪ್ರತಿಯೊಬ್ಬ ಭಾರತೀಯನ ಹೆಮೆ ಎಂದು ಕಾರಜೋಳ ಪ್ರಶಂಸಿಸಿದರು. ಇದಕ್ಕೂ ಮುನ್ನಾ ಸೋಮನಾಥ ದೇವಾಲಯಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
