ನವದೆಹಲಿ,ಜ.10- ಕರ್ನಾಟಕದಲ್ಲಿ ಕ್ರೀಡಾ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ಸದುದ್ದೇಶದಿಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿಶೇಷ ಕಾಳಜಿಯಿಂದಾಗಿ ಮಂಡ್ಯ ಜಿಲ್ಲೆಗೆ ಬಹುಪಯೋಗಿ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 14 ಕೋಟಿ ರೂ. ಮಂಜೂರು ಮಾಡಿದೆ.
ತಾವು ಪ್ರತಿನಿಧಿಸುವ ಮಂಡ್ಯ ಜಿಲ್ಲೆಯಲ್ಲಿ ಕ್ರೀಡಾ ಮೂಲಭೂತ ಸೌಕರ್ಯಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡೆವಿಯಾ ಅವರಿಗೆ ವೈಯಕ್ತಿಕವಾಗಿ ಪತ್ರ ಬರೆದಿದ್ದರು.
ಈ ಪತ್ರಕ್ಕೆ ಸ್ಪಂದಿಸಿರುವ ಡಾ. ಮನ್ಸುಖ್ ಮಾಂಡೆವಿಯಾ, ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 14.00 ಕೋಟಿ ರೂ. ಅನುಮೋದಿತ ವೆಚ್ಚದಲ್ಲಿ ಬಹುಪಯೋಗಿ ಒಳಾಂಗಣ ಕ್ರೀಡಾ ಸಭಾಂಗಣ ನಿರ್ಮಾಣಕ್ಕೆ ಆಡಳಿತಾತಕ ಅನುಮೋದನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿರುವ ಕ್ರೀಡಾಂಗಣವು ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವ, ಕ್ರೀಡಾ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಮತ್ತು ಸಾಮಾಜಿಕ ಸಂವಹನವನ್ನು ಬೆಳೆಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳು, ಕ್ರೀಡಾ ತಂಡಗಳು ಮತ್ತು ಸಮುದಾಯಕ್ಕೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಡಾ. ಮನ್ಸುಖ್ ಮಾಂಡೆವಿಯಾ ಅವರಿಗೆ ಬರೆದ ಪತ್ರದಲ್ಲಿ ಕುಮಾರಸ್ವಾಮಿ ವಿವರಿಸಿದ್ದರು.
ಈ ಸೌಲಭ್ಯವು ಜಿಲ್ಲೆಯ ಕ್ರೀಡಾ ಮೂಲಸೌಕರ್ಯಕ್ಕೆ ಪ್ರಮುಖ ಸೇರ್ಪಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ, ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಅವರು ಮನವರಿಕೆ ಮಾಡಿಕೊಟ್ಟಿದ್ದರು.
ಮಂಡ್ಯದ ಕ್ರೀಡಾ ಪರಂಪರೆಯನ್ನು ಉಲ್ಲೇಖಿಸಿದ್ದ ಕುಮಾರಸ್ವಾಮಿಯವರು, ಜಿಲ್ಲೆಯ ಹಲವಾರು ಆಟಗಾರರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಅನೇಕ ಕ್ರೀಡಾಪಟುಗಳು ಪ್ರಸ್ತುತ ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದರು.
ಖೇಲೋ ಇಂಡಿಯಾ ಯೋಜನೆಯಡಿ ಬೆಂಬಲವನ್ನು ಕೋರಿ, ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು. ಅಂದಾಜು ಯೋಜನಾ ವೆಚ್ಚ 14 ಕೋಟಿ ರೂ. ಎಂದು ಉಲ್ಲೇಖಿಸಿದ್ದರು. ಈ ಯೋಜನೆಯು ಈ ಪ್ರದೇಶದ ಕ್ರೀಡಾ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಸಚಿವರಿಗೆ ಒತ್ತಾಯ ಮಾಡಿದ್ದರು.
ತಮ ಪತ್ರಕ್ಕೆ ಸ್ಪಂದಿಸಿ ಅನುದಾನ ಮಂಜೂರು ಮಾಡಿರುವ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡೆವಿಯಾ ಅವರಿಗೆ ಧನ್ಯವಾದ ತಿಳಿಸಿರುವ ಎಚ್ಡಿಕೆ, ಯೋಜನೆಗೆ ಸಕಾರಾತಕವಾಗಿ ಸ್ಪಂದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಮಂಡ್ಯಕ್ಕೆ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಮತ್ತು ತ್ವರಿತ ಬೆಂಬಲ ನೀಡಿದ್ದಕ್ಕಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡೆವಿಯಾ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಮಂಡ್ಯಕ್ಕೆ ಹೊಸ ಕ್ರೀಡಾ ಯುಗ :
ಬಹುಪಯೋಗಿ ಕ್ರೀಡಾ ಸೌಲಭ್ಯವು ಈಗ ಅನುಮೋದನೆ ಪಡೆದಿರುವುದರಿಂದ, ಮಂಡ್ಯವು ಕ್ರೀಡಾ ಅಭಿವೃದ್ಧಿಯಲ್ಲಿ ಹೊಸ ಯುಗಕ್ಕೆ ಸಾಕ್ಷಿಯಾಗಲಿದೆ. ಈ ಸೌಲಭ್ಯವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುತ್ತದೆ.
ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವ ಕೇಂದ್ರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಬಹುಪಯೋಗಿ ಕ್ರೀಡಾ ಸೌಲಭ್ಯವು ಯುವ ಪ್ರತಿಭೆಗಳನ್ನು ಪೋಷಿಸುತ್ತದೆ, ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಕರ್ನಾಟಕದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಯೋಜನೆಗಳು :
- ಯುವ ಕ್ರೀಡಾಪಟುಗಳ ತರಬೇತಿ
- ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವುದು.
- ಸಾರ್ವಜನಿಕರಲ್ಲಿ ಫಿಟ್ನೆಸ್ ಅನ್ನು ಉತ್ತೇಜಿಸುವುದು.
