ಬೆಂಗಳೂರು,ಡಿ.7- ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಜಿ ನೀಟ್-25 ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯ ದಿನಾಂಕಗಳನ್ನು ಎರಡು ದಿನಗಳಿಗೆ ಮುಂದೂಡಿಕೆ ಮಾಡಿದೆ. ವಿದ್ಯಾರ್ಥಿಗಳ ಕೋರಿಕೆಯಂತೆ ಪರೀಕ್ಷಾ ಪ್ರಾಧಿಕಾರ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಿದೆ.
ಇಂಡಿಗೋ ವಿಮಾನಗಳ ಸಂಕಷ್ಟದಿಂದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಮನವಿಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಿಜಿ ನೀಟ್-25 ಪ್ರವೇಶ ಪ್ರಕ್ರಿಯೆಯಲ್ಲಿ ಆಯ್ಕೆಗಳ ದಾಖಲು, ಶುಲ್ಕ ಪಾವತಿ ಮತ್ತು ದಾಖಲೆ ಸಲ್ಲಿಕೆಯಂತಹ ಮುಖ್ಯ ಹಂತಗಳು ಡಿಸೆಂಬರ್ 8ರವರೆಗೆ ವಿಸ್ತರಿಸಲ್ಪಟ್ಟಿವೆ.
ಈ ಹಿಂದೆ ಡಿಸೆಂಬರ್ 5ರಂದು ಶುಲ್ಕ ಪಾವತಿ ಮಾಡಿ, 6ರಂದು ಕಾಲೇಜುಗಳಿಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಹಲವು ನಗರಗಳಿಗೆ ಬರುವ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದರು. ಇದರಿಂದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಸನ್ನ ಅವರ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ.
ಅಧಿಕೃತ ಹೇಳಿಕೆ ಪ್ರಕಾರ, ಇಂಡಿಗೋ ವಿಮಾನಗಳ ಸಂಚಾರ ರದ್ದತಿಯಿಂದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಆಯ್ಕೆಗಳ ದಾಖಲು ಡಿಸೆಂಬರ್ 8ರ ಬೆಳಗ್ಗೆ 11 ಗಂಟೆಯವರೆಗೆ ವಿಸ್ತರಿಸಲಾಗಿದೆ. ಆಯ್ಕೆ-1 ಮತ್ತು ಆಯ್ಕೆ-2 ಆಯ್ಕೆ ಮಾಡಿದವರು ಡಿಸೆಂಬರ್ 8ರ ಮಧ್ಯಾಹ್ನ 12:30ರ ಒಳಗೆ ಶುಲ್ಕ ಪಾವತಿ ಮಾಡಬೇಕು. ಆಯ್ಕೆ-1 ಆಯ್ಕೆ ಮಾಡಿದವರು ಮಧ್ಯಾಹ್ನ 2:30ರ ಒಳಗೆ ಪ್ರಾಧಿಕಾರದ ಕಚೇರಿಯಲ್ಲಿ ದಾಖಲೆಗಳನ್ನು ಸಲ್ಲಿಸಿ, ನೋಂದಣಿ ಕಾರ್ಡ್ ಡೌನ್ಲೋಡ್ ಮಾಡಿ ಕಾಲೇಜುಗಳಿಗೆ ವರದಿ ನೀಡಬೇಕು. ಈ ನಿರ್ಧಾರವು ವಿದ್ಯಾರ್ಥಿಗಳಿಗೆ ದೊಡ್ಡ ರಿಲೀಫ್ ನೀಡಿದ್ದು, ಇದು ಅಂತಿಮ ವಿಸ್ತರಣೆ ಎಂದು ಸ್ಪಷ್ಟಪಡಿಸಿದೆ.
ಇಂಡಿಗೋದ ಸಂಕಷ್ಟ ಡಿಸೆಂಬರ್ 6ರಿಂದ ತೀವ್ರಗೊಂಡಿದ್ದು, ದೇಶಾದ್ಯಂತ 1,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳು, ವಿಶೇಷವಾಗಿ ಇತರ ರಾಜ್ಯಗಳಿಂದ ಬರುವವರು ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂಜರಿಯಲು ಸಾಧ್ಯವಾಗಿರಲಿಲ್ಲ.
ನಾನು ಮುಂಬೈನಿಂದ ಬೆಂಗಳೂರಿಗೆ ಬರಲು ವಿಮಾನ ಬುಕ್ ಮಾಡಿದ್ದೆ, ಆದರೆ ರದ್ದು ಆಗಿ ರೈಲು ಬಸ್ ಮಾರ್ಗಗಳಲ್ಲಿ ತೊಂದರೆಯಾಗಿ ಈ ವಿಸ್ತರಣೆಯಿಂದ ನಾನು ಶುಲ್ಕ ಪಾವತಿ ಮಾಡಿ ದಾಖಲೆ ಸಲ್ಲಿಸಬಹುದು ಎಂದು ಬಹುತೇಕ ವಿದ್ಯಾರ್ಥಿಗಳು ಹೇಳಿದ್ದಾರೆ.
ಪಿಜಿನೀಟ್-25 ಪ್ರವೇಶ ಪ್ರಕ್ರಿಯೆಯು ಪಿಜಿ-ನೀಟ್ 2025 ಫಲಿತಾಂಶಗಳ ಆಧಾರದ ಮೇಲೆ ನಡೆಯುತ್ತಿದ್ದು, ಕರ್ನಾಟಕದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಎಂಡಿ/ಎಂಎಸ್/ಪಿಜಿ/ ಡಿಪ್ಲೊಮಾ ಕೋಸ್ಗಳಿಗೆ ಸೀಟು ಆಯ್ಕೆಗೆ ಸಂಬಂಧಿಸಿದೆ. ಈಗಿನ ವಿಸ್ತರಣೆಯಿಂದಾಗಿ ಅಭ್ಯರ್ಥಿಗಳು ಆಯ್ಕೆಗಳ ದಾಖಲು ಮಾಡಿ, ಶುಲ್ಕ ಪಾವತಿಸಿ, ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿದೆ.
ಪ್ರಾಧಿಕಾರದ ಕಚೇರಿಯಲ್ಲಿ ದಾಖಲೆ ಸಲ್ಲಿಕೆಗೆ ಸೌಲಭ್ಯ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ತಮ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.ಇಂಡಿಗೋದ ಸಮಸ್ಯೆಯಿಂದ ರೈಲ್ವೇ ಇಲಾಖೆ 89 ವಿಶೇಷ ರೈಲುಗಳನ್ನು ಓಡಿಸುತ್ತಿದ್ದು, ಖಾಸಗಿ ಬಸ್ ದರ ಏರಿಕೆಯಾಗಿದೆ.
