ಬೆಳಗಾವಿ, ಡಿ.18- ಕಂದಾಯ ಸಚಿವರಿಂದ ಕೆರೆ ಸೇರಿದಂತೆ ಸರ್ಕಾರದ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಕುರಿತು ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷಗಳು ವಿಧಾನಸಭೆಯಲ್ಲಿಂದು ಆಗ್ರಹಿಸಿದ್ದರಿಂದ ಸಣ್ಣ ಪ್ರಮಾಣದ ವಾಗ್ವಾದ ನಡೆಯಿತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಂದಾಯ ಸಚಿವರಾಗಿರುವ ಕೃಷ್ಣಭೈರೇಗೌಡ ಅವರು ಕೆರೆಯನ್ನು ನುಂಗಿದ್ದಾರೆ. ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದನ ನಡೆಯುವ ವೇಳೆ ತಪ್ಪು ಸಂದೇಶ ಹೋಗಬಾರದು. ಸಚಿವರು ಈಗಾಗಲೇ ಸದನದ ಹೊರಗೆ ಸ್ಪಷ್ಟನೆ ನೀಡಿದ್ದಾರೆ. ಸದನದಲ್ಲೂ ಹೇಳಿಕೆ ಕೊಟ್ಟು ಗೊಂದಲ ಬಗೆಹರಿಸಲಿ ಎಂದರು.
ಈ ವಿಚಾರವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಇಲ್ಲ ಎಂದು ಸಭಾಧ್ಯಕ್ಷರು ಹೇಳಿದರು.ಸಚಿವರು ಸದನದಲ್ಲೇ ಇದ್ದಾರೆ, ಸ್ವಯಂ ಪ್ರೇರಿತವಾಗಿ ಹೇಳಿಕೆ ಕೊಡಲಿ. ಈ ಸಂಬಂಧಪಟ್ಟಂತೆ ದಾಖಲಾತಿಗಳು ಬಿಡುಗಡೆಯಾಗಿದೆ. ಸಚಿವರ ಹೇಳಿಕೆಯಿಂದ ಎಲ್ಲವೂ ಬಗೆಹರಿಯಬಹುದು ಎಂದು ಅಶೋಕ್ ಹೇಳಿದರು.
ಎದ್ದು ನಿಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸದನದಲ್ಲಿ ಯಾವುದೇ ಸದಸ್ಯರ ಬಗ್ಗೆ ಆರೋಪ ಮಾಡಬೇಕಾದರೆ ಒಂದು ವಾರಕ್ಕಿಂತ ಮೊದಲು ನೋಟಿಸ್ ನೀಡಬೇಕಿದೆ. ಈ ವಿಷಯದಲ್ಲಿ ನನ್ನ ಹಕ್ಕನ್ನು ಬಿಟ್ಟುಕೊಡುತ್ತೇನೆ. ವಾರಕ್ಕಿಂತ ಮೊದಲು ನೋಟೀಸ್ ಬೇಕು ಎಂದು ಒತ್ತಾಯಿಸುವುದಿಲ್ಲ. ನಾನು ಚರ್ಚೆಗೆ ಸಿದ್ಧನಿದ್ದೇನೆ, ವಿರೋಧ ಪಕ್ಷದವರು ಏನು ಬೇಕಾದರೂ ಹೇಳಲಿ, ನಾನು ಉತ್ತರ ಕೊಡುತ್ತೇನೆ ಎಂದರು.
ವಿ.ಸುನೀಲ್ ಕುಮಾರ್, ಸಚಿವರೇ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಲಿ. ನಾವು ಆರೋಪ ಮಾಡುತ್ತಿಲ್ಲ. ಹೊರಗಡೆ ಈ ವಿಚಾರ ಚರ್ಚೆಯಾಗಿದೆ. ಸದನದಲ್ಲಿ ನೀಡಬೇಕಾದ ಹೇಳಿಕೆಯನ್ನು ಸಚಿವರು ಸದನದ ಹೊರಗೆ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.
ಸಚಿವ ಕೃಷ್ಣ ಭೈರೇಗೌಡ ಅವರ ನೆರವಿಗೆ ಬಂದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಇದು ಸಂಪೂರ್ಣ ಖಾಸಗಿ ವಿಚಾರ. ಹೀಗಾಗಿ ಸದನದ ಹೊರಗೆ ಹೇಳಿಕೆ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು. ಸಚಿವರು ಸಿದ್ಧರಿರುವಾಗ ಅವರಿಂದ ಹೇಳಿಕೆ ಕೊಡಿಸಿ ಎಂದು ಆರ್.ಅಶೋಕ್ ಪಟ್ಟು ಹಿಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರು ಸಿದ್ದರಿದ್ದಾರೆ ನೀವೂ ಸಿದ್ಧರಿದ್ದೀರಾ. ಆದರೆ ನಾನು ಸಿದ್ಧನಿಲ್ಲ. ನನಗೆ ವಿತ್ತೀಯ ಕಾರ್ಯಕಲಾಪ ನಡೆಯಬೇಕು. ಮಸೂದೆಗಳು ಚರ್ಚೆ ಆಗಬೇಕು. ಸಮಯ ಇಲ್ಲದ ಕಾರಣ ಈ ವಿಚಾರಕ್ಕೆ ಈಗ ಅವಕಾಶ ನೀಡುವುದಿಲ್ಲ ಎಂದು ಹೇಳಿ ಪೂರಕ ಅಂದಾಜುಗಳ ಚರ್ಚೆಗೆ ಅನುಮತಿ ನೀಡಿದರು.
