ಬೆಂಗಳೂರು, ಜ.2- ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟಿದ್ದಕ್ಕಾಗಿ ಗಲಾಟೆ ಮಾಡಿರುವುದು ಸರಿಯಲ್ಲ. ಸಮಸ್ಯೆ ಯಾರಿಂದ ಉದ್ಭವವಾಗಿದೆ ಎಂದು ನೋಡಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಾಲೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮುಂದೂಡುವ ಹುನ್ನಾರ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ ಎಂದರು.
ಬಳ್ಳಾರಿಯಲ್ಲಿ ಈವರೆಗೂ ವಾಲೀಕಿ ಅವರ ಪ್ರತಿಮೆ ನಿರ್ಮಾಣವಾಗಿರಲಿಲ್ಲ. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಸೇರಿ ಪ್ರತಿಮೆ ನಿರ್ಮಿಸಿದ್ದಾರೆ. ಅದರ ಉದ್ಘಾಟನೆಗೆ ನನಗೂ ಆಹ್ವಾನ ಇತ್ತು. ನಾನು ಹೋಗುವ ತಯಾರಿಯಲ್ಲಿದ್ದೆ. ಆದರೆ ಅಷ್ಟರಲ್ಲಿ ಗಲಾಟೆಯಾಗಿದೆ ಎಂದು ವಿಷಾದಿಸಿದರು.
ಪೋಸ್ಟರ್ ಹಾಕಿದರೆ ಅದು ಎರಡು ದಿನ ಇರುತ್ತದೆ ನಂತರ ಹೋಗುತ್ತದೆ. ಅದಕ್ಕಾಗಿ ಗಲಾಟೆ ಮಾಡಿರುವುದು ಸರಿಯಲ್ಲ. ವಾಲೀಕಿ ಅವರ ಹೆಸರನ್ನು ಮುಂದಿಟ್ಟುಕೊಂಡು ಗಲಾಟೆ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನ ಜೀವ ಹಾನಿಯಾಗಿದೆ. ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ ಎಂದು ಹೇಳಿದರು.
ಶಾಸಕ ಭರತ್ ರೆಡ್ಡಿ ಅವರ ಜೊತೆ ತಾವು ಚರ್ಚೆ ನಡೆಸಲಿದ್ದು, ಕಾರ್ಯಕ್ರಮ ನಡೆದಿದ್ದಾದರೆ ಅದರಲ್ಲಿ ಭಾಗವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಏಕೆ ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನಿಸಿದರು. ಅವರು ಪಕ್ಷದ ಹಿರಿಯ ನಾಯಕರಾಗಿದ್ದು, ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಲಿದೆಯೋ ಕಾದು ನೋಡುವುದಾಗಿ ತಿಳಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ನಾಯಕರಾಗಿದ್ದಾರೆ. ದೆಹಲಿಯಲ್ಲಿ ಎರಡು ಮೂರು ಬಾರಿ ಸಭೆ ನಡೆಸಿದ್ದಾರೆ. ಅಗತ್ಯ ಬಿದ್ದಾಗ ರಾಜ್ಯಕ್ಕೆ ಬರುತ್ತಾರೆ. ಬರಲೇ ಬೇಕು ಎಂಬ ನಿಯಮವೂ ಇಲ್ಲ ಎಂದು ಹೇಳಿದರು.
ಕೋಗಿಲು ಕ್ರಾಸ್ ಬಳಿ ಒತ್ತುವರಿ ತೆರವು ಪ್ರಕರಣದಲ್ಲಿ ಅರ್ಹರಾಗಿದ್ದವರಿಗೆ ಮನೆ ನೀಡಲಾಗುತ್ತದೆ. ಈ ವಿಚಾರ ಇಂದು ಸಂಪುಟ ಸಭೆಯಲ್ಲಿ ಚರ್ಚೆಯಾಗಬಹುದು. ಫಲಾನುಭವಿಗಳ ಆಯ್ಕೆಯಲ್ಲಿ ಹಿಂದೂಗಳು, ಮುಸ್ಲಿಂರು ಎಂಬ ಮಾನದಂಡ ಪರಿಗಣನೆಯಾಗುವುದಿಲ್ಲ. ನಮ ಸರ್ಕಾರ ಎಲ್ಲಾ ವರ್ಗದ ಜನರ ಹಿತ ಕಾಪಾಡಲಿದೆ ಎಂದು ಸಮರ್ಥನೆ ನೀಡಿದರು.
