Monday, January 5, 2026
Homeರಾಜ್ಯಅಪ್ರಾಪ್ತೆಯರ ಮೇಲೆ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ : ಬೆಚ್ಚಿಬಿದ್ದ ಹುಬ್ಬಳ್ಳಿ

ಅಪ್ರಾಪ್ತೆಯರ ಮೇಲೆ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ : ಬೆಚ್ಚಿಬಿದ್ದ ಹುಬ್ಬಳ್ಳಿ

Minors gang-raped by minors: Hubballi shocked

ಹುಬ್ಬಳ್ಳಿ,ಜ.4- ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದೇ ದಿನದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣವು ಇಡೀ ಉತ್ತರ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ.ಶಹರ ಮತ್ತು ಅಶೋಕ್‌ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ನಡೆದಿರುವ ಈ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಅಪ್ರಾಪ್ತರೆ ಆರೋಪಿಗಳಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಶಹರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿಯ ಮೇಲೆ 14-15 ವರ್ಷದ ಮೂವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಪೋಷಕರು ಇಲ್ಲದಿರುವ ಸಮಯದಲ್ಲಿ, ಅದೇ ಪ್ರದೇಶದಲ್ಲಿ ವಾಸಿಸುವ ಬಾಲಕರು ಆಕೆಯನ್ನು ನಿರ್ಜನಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ
ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ದೌರ್ಜನ್ಯಕ್ಕೆ ಒಳಗಾಗಿರುವ ಬಾಲಕಿಗೆ ರಕ್ಷಣೆ ನೀಡಲಾಗಿದೆ ಮತ್ತು ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌‍ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.ಆರೋಪಿಗಳಲ್ಲಿ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ ಬಾಲಕ ಶಾಲೆ ಬಿಟ್ಟವನಂತೆ ಕಾಣುತ್ತಿದೆ ಎಂದು ಆಯುಕ್ತರು ಹೇಳಿದರು.

ಈ ಕೃತ್ಯದ ವಿಡಿಯೋ ತಮ ಬಳಿ ಇದೆ ಎಂದು ಬಾಲಕರು ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ಥ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ಮೊಬೈಲ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗುವುದು ಮತ್ತು ಅಗತ್ಯ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.

ಅದೇ ರೀತಿ ಅಶೋಕ್‌ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತರಿಂದ ಓರ್ವ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆದಿದೆ. ಜೊತೆಗೆ ಆಕೆಯ ತಂದೆ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಶಶಿಕುಮಾರ್‌ ಮಾಹಿತಿ ನೀಡಿದರು.
ಮೊದಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು, ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಕ್ಕಳು ಬಿಡುವಿನ ಸಮಯದಲ್ಲಿ ಯಾರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ ಎಂದು ಪಾಲಕರು ಗಮನಹರಿಸಬೇಕು. ಇಲ್ಲದಿದ್ದರೆ ಇಂತಹ ಅಪರಾಧಗಳು ಹೆಚ್ಚಾಗುವುದಲ್ಲದೆ, ಅವರ ಭವಿಷ್ಯವನ್ನು ಹಾಳು ಮಾಡುತ್ತದೆ ಹೀಗಾಗಿ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News