ಬೆಳಗಾವಿ, ಡಿ.10- ಮಲೆನಾಡು ಭಾಗದಲ್ಲಿ ಮಳೆನೀರು ತಡೆಗೋಡೆಗಳ ನಿರ್ಮಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಪಡಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಹೆಚ್.ಡಿ.ತಮಯ್ಯ, ಮಲೆನಾಡು ಭಾಗದಲ್ಲಿ ಬೆಟ್ಟಗುಡ್ಡಗಳಲ್ಲಿ ಮನೆ ನಿರ್ಮಿಸಿಕೊಳ್ಳಲಾಗಿದೆ. ಮಳೆ ಹೆಚ್ಚಾದಾಗ ಜಮೀನು ಮತ್ತು ಮನೆ ಗಳು ಹಾನಿಗೊಳಗಾಗುತ್ತವೆ. ಮಳೆ ನೀರು ತಡೆಗೆ ಗೋಡೆ ನಿರ್ಮಿಸಲು ನಿಷೇಧವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರ ಇಂತಹ ಕಾಮಗಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರ ಬೇಡಿಕೆಯಂತೆ ತಡೆಗೋಡೆ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಲಿಂಗ ಬದಲಾವಣೆ :
ಶಾಸಕರು ಆರಂಭದಲ್ಲಿ ನನ್ನನ್ನು ಸಮರ್ಥ ಮಂತ್ರಿ ಎಂದು ಹೇಳಿದರು. ಅದರ ಬೆನ್ನಲ್ಲೇ ಆದರೆ… ಎಂಬ ಅನುಮಾನದ ಮಾತನಾಡಿದ್ದಾರೆ. ವಿರೋಧ ಪಕ್ಷಗಳಿಗೆ ನನ್ನ ವಿರುದ್ಧ ಮುಗಿ ಬೀಳಲು ಇಷ್ಟು ಸಾಕು ಎಂದು ಹೇಳಿದ ಖರ್ಗೆ, ಶಾಸಕ ತಿಮಯ್ಯ ಕೇಳಿರುವ ಪ್ರಶ್ನೆಗೆ ಎನ್ನುತ್ತಿದ್ದಂತೆ, ಶಾಸಕ ತಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷರು ನನ್ನ ಹೆಸರನ್ನು ತಿಮಯ್ಯ ಎಂದು ಕರೆದರು. ಈಗ ಎಲ್ಲರೂ ಅದೇ ರೀತಿ ಹೇಳುತ್ತಿದ್ದಾರೆ ಎಂದು ತಗಾದೆ ತೆಗೆದರು. ತಕ್ಷಣವೇ ಸಭಾಧ್ಯಕ್ಷರು ಇನ್ನು ಮುಂದೆ ತಮಯ್ಯ ಅವರನ್ನು ತಿಮ್ಮಯ್ಯ ಎಂದು ಯಾರಾದರೂ ಕರೆದರೆ ದಂಡ ವಿಧಿಸುವುದಾಗಿ ಎಚ್ಚರಿಸಿದರು.
ಕ್ಷಮೆ ಕೇಳಿದ ಸಚಿವ ಪ್ರಿಯಾಂಕ್ ಖರ್ಗೆ, ಹೆಸರಿನಲ್ಲಿ ವ್ಯತ್ಯಾಸವಾದರೆ,. ಪರಿಣಾಮ ಏನು ಎಂದು ನನಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ನನ್ನ ಹೆಸರು ಪ್ರಿಯಾಂಕ ಎಂದಾಗಿದ್ದು ಕೆಲವೊಮೆ ಲಿಂಗ ಬದಲಾವಣೆಯನ್ನೇ ಮಾಡಿಬಿಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಚಿಕ್ಕಮಂಗಳೂರಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಯಾವುದೇ ನಿಷೇಧ ಇಲ್ಲ. ಅಧಿಕಾರಿಗಳು ಆ ರೀತಿ ಮಾಹಿತಿ ನೀಡಿದ್ದರೆ ಸರಿಪಡಿಸಲಾಗುವುದು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಕೇಂದ್ರ ಸರ್ಕಾರ ನರೇಗಾ ಯೋಜನೆಯ ಮೆಟೀರಿಯಲ್ ಬಿಲ್ ಮತ್ತು 15ನೇ ಹಣಕಾಸು ಆಯೋಗದ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಬಾಕಿ ಹಣ ಬಂದಾಗ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲಾ ಪಂಚಾಯ್ತಿಗಳಿಗೆ ಹಣ ಒದಗಿಸಲಾಗುವುದು. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ಹೇಳಿದರು. ಶಾಸಕ ತಮಯ್ಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಬಿಜೆಪಿಯವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ನರೇಗಾ ಯೋಜನೆಯ ಬಾಕಿ ಹಣ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು.
