ಬೆಂಗಳೂರು,ಜ.9- ಒಕ್ಕಲಿಗ ಸಮುದಾಯಕ್ಕೆ ಸಮಸ್ಯೆಯಾಗುವಂತಹ ಸಂದರ್ಭ ಬಂದರೆ 1993ರಲ್ಲಿ ನಡೆದಂತಹ ದೊಡ್ಡ ಹೋರಾಟಕ್ಕೆ ನಾಂದಿ ಆಗಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಅರಮನೆ ಮೈದಾನದಲ್ಲಿಂದು ಫಸ್ಟ್ ಸರ್ಕಲ್ ವತಿಯಿಂದ ಹಮಿಕೊಂಡಿರುವ ಉದ್ಯಮಿ ಒಕ್ಕಲಿಗ ಎಕ್ಸ್ ಪೊ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ವಿಧಾನಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರ ಕಡೆ ತಿರುಗಿ ಮಾತನಾಡಿದ ಶ್ರೀಗಳು, ಸುತ್ತಮುತ್ತಲೂ ನಡೆಯುತ್ತಿರುವ ವಿಚಾರ ಗಮನಿಸಿದರೆ 1993ರ ಇತಿಹಾಸ ಮರುಕಳಿಸಬಹುದು. ಆ ರೀತಿ ಮರುಕಳಿಸದ ಹಾಗೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದು ಸಲಹೆ ಮಾಡಿದರು.
1993 ರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಒಕ್ಕಲಿಗರ ಬೃಹತ್ ರ್ಯಾಲಿ ಅಥವಾ ಹೋರಾಟವನ್ನು ನಡೆಸಲಾಗಿತ್ತು. ಅಂತಹ ಸಂದರ್ಭ ಸಮಸ್ಯೆ ಬಂದರೆ ಮತ್ತೆ ಆ ರೀತಿಯ ಹೋರಾಟ ಮರುಕಳಿಸಬಹುದು. ಅಂತಹ ಅವಕಾಶ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಕಾಲೀನ ವ್ಯವಸ್ಥೆ ಮೇಲಿದೆ ಎಂದು ನುಡಿದರು.
ಸಮುದಾಯದವರು ಅಂದಿಗಿಂತಲೂ ಇಂದು ಹೆಚ್ಚು ಪ್ರಜ್ಞಾವಂತರಾಗಿದ್ದಾರೆ. ಹೆಚ್ಚಿನ ಸೌಕರ್ಯಗಳೂ ಈಗಿವೆ. ಒಂದು ವೇಳೆ ಅಂತಹ ಪರಿಸ್ಥಿತಿ ಮರುಕಳಿಸಿದರೆ ದೊಡ್ಡ ಹೋರಾಟಕ್ಕೆ ನಾಂದಿಯಾಗಲಿದೆ. ಸಮುದಾಯದ ಬಗ್ಗೆ ನಾಳೆ ಹೆಚ್ಚು ಮಾತನಾಡುವುದಾಗಿ ಹೇಳಿದರು.
ಒಕ್ಕಲಿಗ ಸಮುದಾಯದ ಎಲ್ಲಾ ವಲಯಗಳೂ ಒಗ್ಗೂಡಬೇಕು ಹಾಗೂ ಆಯಾ ವಲಯಗಳಲ್ಲಿ ಪ್ರವರ್ಧಮಾನಕ್ಕೆ ಬರಬೇಕು. ಯುವ ಸಮುದಾಯ ಯೋಜಿಸಿ, ಅಧ್ಯಯನ ಮಾಡಿ ಉದ್ದಿಮೆಯನ್ನು ಸ್ಥಾಪಿಸಬೇಕೇ ಹೊರತು ಪೂರ್ವಿಕರು ಉಳಿಸಿರುವ ಜಮೀನನ್ನು ಮಾರಿಕೊಂಡು ಶೋಕಿ ಮಾಡಬಾರದು, ಉದ್ಯಮ ಆರಂಭಿಸಿದ ಮೇಲೆ ಅದರ ಬೆಳವಣಿಗೆ ಕಡೆ ಗಮನ ಹರಿಸಬೇಕು. ನಷ್ಟ ಅನುಭವಿಸಬಾರದು ಎಂದು ಕಿವಿಮಾತು ಹೇಳಿದರು.
ಜ್ಞಾನ ಆಧಾರಿತ ಯುಗವಾಗಿದ್ದು ಬದುಕಿನಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಫಸ್ಟ್ ಸರ್ಕಲ್ ಆರಂಭಿಸಿರುವ ಉದ್ಯಮಿ ಒಕ್ಕಲಿಗ ಪರಿಕಲ್ಪನೆ ಚೆನ್ನಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ದೂರದೃಷ್ಟಿ ಕೊಟ್ಟು ಜೊತೆಗೆ ಕರೆದೊಯ್ಯುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಬೇಕು. ಸಮುದಾಯ ಕೇವಲ ಒಂದು ವಲಯದಲ್ಲಿ ಅಲ್ಲ, ಎಲ್ಲಾ ವಲಯದಲ್ಲೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ನಿರೀಕ್ಷಿತ ಫಲ ದೊರೆಯಲಿದೆ. ಫಸ್ಟ್ ಸರ್ಕಲ್ ಇನ್ನಷ್ಟು ಎತ್ತರಕ್ಕೆ ಬೆಳೆದು ಪ್ರವರ್ಧಮಾನಕ್ಕೆ ಬರಬೇಕು ಎಂದು ಹಾರೈಸಿದರು.
ನಾಡಪ್ರಭು ಕೆಂಪೇಗೌಡರು ನಮ ಸಮುದಾಯದ ಐಕಾನ್ ಆಗಿದ್ದಾರೆ. ಹಾಗೆಂದು ಅವರು ಕತ್ತಿ ಹಿಡಿದಿದ್ದರು ಎಂದು ನಾವೂ ಕತ್ತಿ ಹಿಡಿದು ಓಡಾಡಲಾಗುವುದಿಲ್ಲ. ಪರಿಸ್ಥಿತಿ ಮತ್ತು ಕಾಲಕ್ಕೆ ತಕ್ಕಂತೆ ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.
