ಬೆಳಗಾವಿ,ಡಿ.18- ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಯಾವುದೇ ಹಣಕಾಸಿನ ಸಮಸ್ಯೆ ಎದುರಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದರು.
ಶೂನ್ಯವೇಳೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಶಕ್ತಿ ಯೋಜನೆಯಲ್ಲಿ 625 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಶಕ್ತಿ ಯೋಜನೆಯ ಬಾಕಿ ಹಣ ಸರಕಾರದಿಂದ ಬರಬೇಕು. ಮುಂದಿನ ಬಜೆಟ್‌ನಲ್ಲಿ ಸಿಎಂ ಕೊಡುತ್ತಾರೆ. ಇಲಾಖೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಬಿಜೆಪಿಯ ಭಾರತಿ ಶೆಟ್ಟಿ ಅವರು, ಶಿರಸಿ-ಹುಬ್ಬಳ್ಳಿ ನಡುವೆ ಮೂರು ಗಂಟೆ ಬಸ್ ಸಂಚರಿಸುತ್ತದೆ. ಇಷ್ಟು ತಡವಾಗಿ ಬರಬೇಕಾದರೆ ಬಸ್ಸುಗಳಿಗೆ ಸರ್ಕಾರ ಹಣ ನೀಡುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ನಾವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆಯೇ ನಾಲ್ಕು ಸಾವಿರ ಕೋಟಿ ಸಾಲ ಇತ್ತು. ಸಾರಿಗೆ ಇಲಾಖೆಯಲ್ಲಿ 4 ಸಾವಿರ ಕೋಟಿ ಸಾಲ ಇತ್ತು. ವೇತನ ಬಾಕಿಯನ್ನು ಉಳಿಸಿ ಹೋಗಿದ್ದರು. ಸದ್ಯ ಬಸ್ ಗಳು 1,84 ಲಕ್ಷ ಟ್ರಿಪ್ ಓಡುತ್ತಿವೆ. ಒಂದು ಟ್ರಿಪ್ ಹೀಗೆ ವ್ಯತ್ಯಾಸ ಆಗಿರಬಹುದು. ನಾವು 9000 ಹುದ್ದೆ ನೇಮಿಕಾತಿ ಮಾಡಿದ್ದೇವೆ. 2000 ಕೋಟಿ ರೂ. ಸರಕಾರ ಸಾಲವಾಗಿ ಕೊಟ್ಟಿದೆ. ಸಾಲವನ್ನು ಸರಕಾರವೇ ತೀರಿಸಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
