Sunday, December 28, 2025
Homeರಾಜ್ಯಡ್ರಗ್ಸ್ ನಿಯಂತ್ರಣ ನಿರ್ಲಕ್ಷಿಸುವ ಅಧಿಕಾರಿಗಳ ತಲೆದಂಡ : ಪರಮೇಶ್ವರ್‌ ಎಚ್ಚರಿಕೆ

ಡ್ರಗ್ಸ್ ನಿಯಂತ್ರಣ ನಿರ್ಲಕ್ಷಿಸುವ ಅಧಿಕಾರಿಗಳ ತಲೆದಂಡ : ಪರಮೇಶ್ವರ್‌ ಎಚ್ಚರಿಕೆ

Officers who ignore drug control will be punished: Parameshwara warns

ಬೆಂಗಳೂರು, ಡಿ.28- ಮಾದಕ ವಸ್ತುಗಳ ತಯಾರಿಕೆ ಜಾಲದ ವಿಷಯವಾಗಿ ನಿರ್ಲಕ್ಷ್ಯ ವಹಿಸುವ ಪೊಲೀಸ್‌‍ ಅಧಿಕಾರಿಗಳನ್ನು ಅಮಾನತುಗೊಳಿಸುವುದಷ್ಟೇ ಅಲ್ಲ, ಸೇವೆಯಿಂದ ವಜಾಗೊಳಿ ಸುವುದು ಸೇರಿದಂತೆ ಇತರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.

ನಗರ ಪೊಲೀಸ್‌‍ ಆಯುಕ್ತರ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಾದಕ ವಸ್ತು ತಯಾರಿಕೆ ಘಟಕ ಪತ್ತೆಯಾಗಿರುವುದರ ಹಿನ್ನೆಲೆಯಲ್ಲಿ ನಾವು ಸಮರ್ಥನೆಗಳನ್ನು ನೀಡುವುದಿಲ್ಲ.
ಆದರೆ ಮಾದಕ ವಸ್ತು ಚಟುವಟಿಕೆಗಳ ಮೇಲೆ ನಾವು ಕಟ್ಟ ನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಒಂದು ಸ್ಥಳದಲ್ಲಿ ಮಾದಕ ವಸ್ತು ತಯಾರಿಕೆಯ ಘಟಕ ಆರಂಭಿಕ ಹಂತದಲ್ಲಿತ್ತು. ಅಲ್ಲಿ ಇನ್ನೂ ಮಾದಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರಲಿಲ್ಲ. ಒಂದು ವೇಳೆ ಮಾರಾಟ ಮಾಡುತ್ತಿದ್ದರೆ ನಮ ಪೊಲೀಸರು ಹಿಡಿದು ಹಾಕುತ್ತಿದ್ದರು ಎಂದರು.

ತಯಾರಿಕೆಯ ಹಂತದ ಮಾಹಿತಿ ಮಹಾರಾಷ್ಟ್ರದ ಪೊಲೀಸರಿಗೆ ಸಿಕ್ಕಿದೆ. ಅಲ್ಲಿಂದ ಇಲ್ಲಿಗೆ ಬಂದು, ನಮ ಪೊಲೀಸರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆದಿಲ್ಲ. ಬೆಂಗಳೂರಿನ ಡಿಸಿಪಿಯವರೇ ಖುದ್ದು ಆ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಮಾದಕ ವಸ್ತುಗಳನ್ನು ಹತೋಟಿಯಲ್ಲಿಡಲು ರಾಷ್ಟ್ರಮಟ್ಟದಲ್ಲೇ ಕಾರ್ಯಾಚರಣೆಗಳು ನಡೆಯುತ್ತಿವೆ. ಇದು ಒಬ್ಬರ ಅಥವಾ ಇಬ್ಬರ ಜವಾಬ್ದಾರಿ ಎಂಬುದಲ್ಲ. ಎನ್‌ಡಿಪಿಎಸ್‌‍ ರಾಷ್ಟ್ರೀಯ ಕಾಯಿದೆ, ಎಲ್ಲ ರಾಜ್ಯಗಳು ಅದನ್ನು ಪಾಲಿಸುತ್ತವೆ. ಇದು ಒಕ್ಕೂಟ ಕಾರ್ಯಾಚರಣೆ ಎಂದರು.
ಬೇರೆ ರಾಜ್ಯಗಳಲ್ಲಿ ನಮವರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಾರೆ. ಆಗ ಅಲ್ಲಿನ ಪೊಲೀಸರ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ನಮವರು ಇನ್ನು ಎರಡು ಮೂರು ಪ್ರಕರಣಗಳಲ್ಲಿ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಲು ತಯಾರಾಗಿದ್ದಾರೆ. ಬೇರೆ ರಾಜ್ಯದವರು ಬಂದು ನಮಲ್ಲಿ ಕಾರ್ಯಚರಣೆ ಎಂದು ನಡೆಸಿದರೆ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಮೈಸೂರಿನ ಘಟನೆಯ ಬಳಿಕ ಮಾದಕ ವಸ್ತು ತಯಾರಿಕೆಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚಿಸಲಾಗಿತ್ತು. ಈಗ ಪತ್ತೆಯಾಗಿರುವ ತಯಾರಿಕಾ ಘಟಕಕ್ಕೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಲೋಪಗಳು ಕಂಡು ಬಂದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿದರು.

ಇಂತಹ ಘಟನೆಗಳಲ್ಲಿ ಡಿಸಿಪಿಯಿಂದ ಕೆಳಹಂತದ ಪೊಲೀಸರವರೆಗೂ ಕ್ರಮ ಕೈಗೊಳ್ಳಲಾಗುತ್ತದೆ. ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಇತರ ರೀತಿಯ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದರು.

ಹೊಸ ವರ್ಷಾಚರಣೆಗೆ ಮಾದಕ ವಸ್ತುಗಳು ಸರಬರಾಜಾಗಬಾರದು ಎಂಬ ಕಾರಣಕ್ಕೆ ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ನಾವು ಮುಂಜಾಗ್ರತೆ ವಹಿಸಿದ್ದೇವೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ತಯಾರಿಕಾ ಘಟಕದಲ್ಲಿಲ್ಲ 1.20 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದಾಗಿ ಹೇಳಿದರು.

RELATED ARTICLES

Latest News