ಬೆಳಗಾವಿ,ಡಿ.11- ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾ ಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಶರಣಗೌಡ ಕಂದಕೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಮೀಸಲಾತಿಯನ್ವಯ ನ್ಯಾಯಬೆಲೆ ಅಂಗಡಿಗಳನ್ನು ವಿಕೇಂದ್ರೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 20460 ನ್ಯಾಯಬೆಲೆ ಅಂಗಡಿಗಳಿದ್ದು, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸೇರಿದವರಿಗೆ 1473 ಅಂಗಡಿಗಳು ಮಾತ್ರ ಇವೆ ಎಂದು ಹೇಳಿದರು.
ಕರ್ನಾಟಕ ಅಗತ್ಯವಸ್ತುಗಳ ಕಾಯ್ದೆಯಡಿ ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೇ.10 ರಷ್ಟು ಎಸ್‌ಸಿ, ಎಸ್‌ಟಿ ಜನಸಂಖ್ಯೆ ಇರುವ ಕಡೆಗಳಲ್ಲಿ ಆ ವರ್ಗದವರಿಗೆ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಅಧಿಕಾರ ನೀಡಲಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಾಲಿಕೆ ಆಯುಕ್ತರು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಆಹಾರ ಇಲಾಖೆಯ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಸುವಿಧ ಕಾರ್ಯಕ್ರಮದಡಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೇರವಾಗಿ ಪಡಿತರವನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿಯಿಂದ 3 ಕಿ.ಮೀ.ಗಿಂತ ದೂರವಿರುವ ಗ್ರಾಮವಿದ್ದರೆ ಉಪಕೇಂದ್ರಗಳ ಮೂಲಕ ಪಡಿತರ ವಿತರಣೆ ಮಾಡಲಾಗುವುದು. ತಾಂಡಾಗಳಲ್ಲಿ ನೇರವಾಗಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶರಣಗೌಡ ಕಂದಕೂರ್, 8 ಜಿ.ಪಂ. ಕ್ಷೇತ್ರ ಗುರುಮಿಠ್ಕಲ್ ಕ್ಷೇತ್ರದಲ್ಲಿ ಇದ್ದು, 55 ತಾಂಡಾಗಳಿವೆ. 4 ಜಿ.ಪಂ. ಕ್ಷೇತ್ರ ಹಾಗೂ 23 ತಾಂಡಾಗಳಿಗೆ ಮಾತ್ರ ಸೀಮಿತ ಉತ್ತರ ಕೊಟ್ಟಿದ್ದಾರೆ. ಉಚಿತ ಅಕ್ಕಿ ಕೊಟ್ಟರೂ ನಾಲ್ಕೈದು ಕಿ.ಮೀ. ಹೋಗಿ ಪಡಿತರ ತರಬೇಕು. ಆಟೋ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಗಮನ ಸೆಳೆದರು.
ಮಧ್ಯಪ್ರವೇಶಿಸಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ರವರು ಸರ್ಕಾರದ ಆದೇಶ ಪಾಲನೆ ಮಾಡದವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.ಸರ್ಕಾರದ ಆದೇಶದಂತೆ ಆಯಾ ಗ್ರಾಮಗಳಲ್ಲಿ ಪಡಿತರ ವಿತರಣೆ ಮಾಡದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಕ್ರಮಕ್ಕೆ ಆಗ್ರಹ :
ನನಗೆ ನೀಡಿರುವ ಉತ್ತರ ಪ್ರತಿಯಲ್ಲಿ ವಿಧಾನಪರಿಷತ್ ಎಂದಿದೆ. ನಾವು ವಿಧಾನಸಭೆಯಲ್ಲಿದ್ದೇವೆ. ಈ ರೀತಿ ಉತ್ತರ ಒದಗಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ್ ಆಗ್ರಹಿಸಿದರು.
ಉತ್ತರ ನೋಡಿ ನನಗೆ ಗೊಂದಲವಾಯಿತು. ನಾನು ವಿಧಾನಪರಿಷತ್‌ನಲ್ಲಿದ್ದೆಯೋ ಅಥವಾ ವಿಧಾನಸಭೆಯಲ್ಲಿದ್ದೇನೆಯೋ ಎಂದು ಕಸಿವಿಸಿಯಾಯಿತು ಎಂದರು. ಆಗ ಸಚಿವರು ವಿಧಾನಸಭೆ ಎಂದೇ ಇದೆ ಎಂದಾಗ ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷರು, ನಿಮ ಉತ್ತರದ ಪ್ರತಿಯನ್ನು ಶಾಸಕರಿಗೆ ಕೊಡಿ, ಶಾಸಕರ ಪ್ರತಿಯನ್ನು ನೀವು ಪಡೆಯಿರಿ ಎಂಬ ಸಲಹೆ ಮಾಡಿದರು. ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂದು ಶಾಸಕರು ಆಗ್ರಹಿಸಿದಾಗ ಆ ರೀತಿ ಕ್ರಮವಾದರೆ ಕಚೇರಿಯೇ ಖಾಲಿಯಾಗುತ್ತದೆ ಎಂದು ಹೇಳಿ ಈ ವಿಚಾರಕ್ಕೆ ತೆರೆ ಎಳೆದರು.
