ಬೆಂಗಳೂರು,ಜ.3- ಕಳೆದ ಒಂದು ತಿಂಗಳಿನಿಂದ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ತರಕಾರಿ, ಅವರೆಕಾಯಿ ಸೊಗಡಿನ ಹಿನ್ನೆಲೆಯಲ್ಲಿ ತುಸು ಇಳಿಕೆಯಾಗಿದೆ.ಗಗನಕ್ಕೇರಿದ್ದ ತರಕಾರಿಗಳ ಬೆಲೆ ಇಳಿದಿದ್ದು, ಗ್ರಾಹಕರಿಗೆ ತುಸು ಹೊರೆ ಕಡಿಮೆಯಾದಂತಾಗಿದೆ. ಅಪಾರ ಪ್ರಮಾಣದಲ್ಲಿ ಮಾರುಕಟ್ಟೆಗೆ ಅವರೆಕಾಯಿ ಬಂದಿದ್ದು, ಇದರ ಪರಿಣಾಮವಾಗಿ ಉಳಿದ ತರಕಾರಿಗಳ ಬೇಡಿಕೆ ಕಡಿಮೆಯಾಗಿದೆ. ಜೊತೆಗೆ ಧನುರ್ಮಾಸದ ಹಿನ್ನೆಲೆಯಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದ ಕಾರಣ ಕೂಡ ಬೆಲೆ ಇಳಿಕೆಗೆ ಕಾರಣವಾಗಿದೆ.
ಟೊಮ್ಯಾಟೊ, ನುಗ್ಗೆಕಾಯಿ ಹೊರತುಪಡಿಸಿದರೆ ಎಲ್ಲಾ ತರಕಾರಿಗಳ ಬೆಲೆ ಅಷ್ಟೇನೂ ಇಲ್ಲ. ಟೊಮ್ಯಾಟೊ ಕೆಜಿಗೆ 50 ರೂ.ಗಳಿಂದ 60 ರೂ.ಗೆ ಮಾರಾಟವಾಗುತ್ತಿದೆ. ನುಗ್ಗೆಕಾಯಿ 400 ರೂ.ಗೆ ಮಾರಾಟವಾಗುತ್ತಿದೆ. ನಾಟಿ ಬೀನ್‌್ಸ ಕೆಜಿಗೆ 60 ರೂ., ರಿಂಗ್ ಬೀನ್‌್ಸ 40 ರೂ., ಹಸಿರು ಬಟಾಣಿ 40 ರೂ., ನವಿಲುಕೋಸು 30 ರೂ., ಸೌತೆಕಾಯಿ 20 ರೂ., ಬೀಟ್‌ರೋಟ್ 30 ರೂ., ಕ್ಯಾಪ್ಸಿಕಂ 40 ರೂ., ಕ್ಯಾರೆಟ್ 40 ರೂ., ಬದನೆಕಾಯಿ 30 ರೂ., ಮೂಲಂಗಿ 25 ರೂ., ಆಲೂಗಡ್ಡೆ 30 ರೂ.ಗಳಿಗೆ ಮಾರಾಟವಾಗುತ್ತಿವೆ.
ಈ ಬಾರಿ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ಅವರೆಕಾಯಿ ಮತ್ತು ಹಸಿರು ಬಟಾಣಿ ಬಂದಿದ್ದು, ಜನರು ಹೆಚ್ಚಾಗಿ ಅವರೆಕಾಯಿ ಖರೀದಿಸುತ್ತಿದ್ದು, ಇತರೆ ತರಕಾರಿಗಳನ್ನು ಹೆಚ್ಚಾಗಿ ಕೊಳ್ಳದ ಕಾರಣ ಬೆಲೆ ಇಳಿಕೆಯಾಗಿದೆ ಎಂದು ವ್ಯಾಪಾರಿ ರಂಗಸ್ವಾಮಯ್ಯ ಅವರು ತಿಳಿಸಿದ್ದಾರೆ. ಟೊಮ್ಯಾಟೊ ಮಾತ್ರ ಕಳೆದ ಒಂದು ತಿಂಗಳಿನಿಂದಲೂ ಸಹ ಏರುತ್ತಲೇ ಇದ್ದು, 50 ರೂ.ಗಳಿಂದ 60 ರೂ.ಗಳಿಗೆ ಮಾರಾಟವಾಗುತ್ತಿದೆ.
ಹೆಚ್ಚಾದ ಚಳಿ ಹಾಗೂ ವ್ಯಾಪಕ ಮಂಜಿನಿಂದ ಕೂಡಿದ ಹವಾಮಾನ ಬದಲಾವಣೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆ ಬಾರದಿರುವುದರಿಂದ ಬೇಡಿಕೆ ಹಚ್ಚಾಗಿ ಬೆಲೆಯೂ ಕೂಡ ಹೆಚ್ಚಳವಾಗಿದೆ.
ಪಾತಾಳ ತಲುಪಿದ ಸೊಪ್ಪು :
ಪೌಷ್ಠಿಕ ಆಹಾರ ಎಂದೇ ಪರಿಗಣಿಸಲ್ಪಟ್ಟ ಸೊಪ್ಪಿನ ಬೆಲೆ ಪಾತಾಳ ತಲುಪಿದ್ದು, ಎಲ್ಲಾ ಸೊಪ್ಪಿನ ಬೆಲೆ ಕಂತೆಗೆ 10 ರೂ.ಗಳಿಗೆ ಚಿಲ್ಲರೆಯಾಗಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆ ಬೆಲೆಗೆ ದೊರೆಯುತ್ತಿದೆ.
