ಬೆಂಗಳೂರು,ಡಿ.21-ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶ ಸಂಬಂಧ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಡಿ.23ರ ಬದಲಿಗೆ ನಾಳೆಯೇ ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕೆಲ ಅಭ್ಯರ್ಥಿಗಳಿಗೆ ಅಖಿಲ ಭಾರತ ಮಟ್ಟದ, ಎಂಸಿಸಿ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದು, ಅಂಥವರು ಒಂದು ವೇಳೆ ಅಲ್ಲಿಯೇ ಹೋಗಿ ಪ್ರವೇಶ ಪಡೆಯುವುದಿದ್ದರೆ ಅವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ. ನಾಳೆ ಸಂಜೆ 6 ಗಂಟೆ ನಂತರ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಸಿಸಿ ಸೀಟಿಗೇ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ತಮ ಮೂಲ ದಾಖಲೆಗಳನ್ನು ಡಿ.23ರಂದು ಸಂಜೆ 4 ಗಂಟೆಯೊಳಗೆ ಕೆಇಎ ಕಚೇರಿಗೆ ಬಂದು ಪಡೆಯಬಹುದು. ಈ ಸುತ್ತಿನಲ್ಲಿ ಭಾಗವಹಿಸಲು ಕಟ್ಟಿರುವ ಶುಲ್ಕದಲ್ಲಿ 25 ಸಾವಿರ ರೂಪಾಯಿ ಕಡಿತ ಮಾಡಿಕೊಂಡು ಉಳಿದ ಹಣವನ್ನು ಒಂದೇ ದಿನದಲ್ಲಿ ಹಿಂದಿರುಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.
ಎಂಸಿಸಿ ಸೀಟಿಗೆ ಪ್ರವೇಶ ಪಡೆಯುವ ಕಾರಣದಿಂದ ಪ್ರಾಧಿಕಾರದಲ್ಲಿ ಎರಡನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಹಂಚಿಕೆಯಾಗಿ ರದ್ದುಗೊಳ್ಳುವ ಪಿಜಿ ಸೀಟುಗಳನ್ನು ಅದೇ ಸುತ್ತಿನಲ್ಲೇ ಅರ್ಹರಿಗೆ ಸಿಗುವ ಹಾಗೆ ಮಾಡಿ, ಡಿ.24ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಈ ಮೊದಲು ದಾಖಲಿಸಿದ್ದ ಇಚ್ಛೆ/ಆಯ್ಕೆಗಳ ಆಧಾರದ ಮೇಲೆಯೇ ಅಂತಿಮವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. ಹಾಗೆಯೇ ಈ ಸುತ್ತಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೂ 3ನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಈ ಸಂಬಂಧ ಮಾರ್ಗಸೂಚಿಗಳನ್ನು ಬದಲಿಸಲಾಗಿದೆ ಎಂದು ಅವರು ಹೇಳಿದ್ದಾರೆ,
